Kalaburagi | ಶಿಕ್ಷಣ ಸಂಸ್ಥೆಯ ಗುಣಮಟ್ಟದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ: ಶಶೀಲ್ ಜಿ. ನಮೋಶಿ

ಕಲಬುರಗಿ: ಶಿಕ್ಷಣ ಸಂಸ್ಥೆಯ ಸಮಗ್ರ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾರ್ಥಿಗಳ ಸಮರ್ಪಣಾ ಭಾವ, ಕರ್ತವ್ಯನಿಷ್ಠೆ ಮತ್ತು ಪರಸ್ಪರ ಸಹಕಾರ ಅತ್ಯಂತ ಮಹತ್ವದ್ದಾಗಿದೆ ಎಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹೇಳಿದರು.
ನಗರದ ಬಸವೇಶ್ವರ ಬೋಧನಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಚ್‌ಕೆಇ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕೇಂದ್ರ ಧ್ವಜಾರೋಹಣ ಕಾರ್ಯಕ್ರಮದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಭಿವೃದ್ಧಿಯಲ್ಲಿ ಸದಸ್ಯರ ಸಹಕಾರ ಹಾಗೂ ಸಿಬ್ಬಂದಿಯ ಸೇವಾ ಮನೋಭಾವ ಪ್ರಮುಖ ಪಾತ್ರ ವಹಿಸುತ್ತವೆ. ಆಡಳಿತ ಮಂಡಳಿಗೆ ಸದಸ್ಯರು ಹಾಗೂ ಸಿಬ್ಬಂದಿಯಿಂದ ಸಂಪೂರ್ಣ ಸಹಕಾರ ದೊರೆತಿರುವುದರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ ಎಂದು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ಬಸವೇಶ್ವರ ಆಸ್ಪತ್ರೆಯನ್ನು ಸಂಸ್ಥೆಯ ಪ್ರತಿಯೊಬ್ಬ ಸದಸ್ಯರೂ ಹೆಮ್ಮೆಯಿಂದ ‘ನಮ್ಮದೇ ಆಸ್ಪತ್ರೆ’ ಎಂದು ಕರೆಯುವಂತಾಗಬೇಕು ಎಂಬುದು ತಮ್ಮ ದೃಷ್ಟಿಕೋನವಾಗಿತ್ತು. ಸದಸ್ಯರ ಬೆಂಬಲದೊಂದಿಗೆ ಆಸ್ಪತ್ರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಆಧುನಿಕ ವೈದ್ಯಕೀಯ ಉಪಕರಣಗಳ ಅಳವಡಿಕೆ, ಸುಧಾರಿತ ಪ್ರಯೋಗಾಲಯ ಹಾಗೂ ಔಷಧಾಲಯ ಸೇವೆ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳನ್ನು ತರಲಾಗಿದೆ ಎಂದರು.
ಅನುಭವಿ ವೈದ್ಯರು ಹಾಗೂ ಸೂಪರ್ ಸ್ಪೆಷಲಿಸ್ಟ್‌ಗಳ ಸೇವೆ ಒದಗಿಸುವ ಮೂಲಕ ಆಸ್ಪತ್ರೆಯನ್ನು ಇನ್ನಷ್ಟು ಉತ್ತಮ ಹಾಗೂ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆಯನ್ನಾಗಿ ರೂಪಿಸಲು ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಇದಕ್ಕಾಗಿ ವೈದ್ಯರು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳ ಸಾಧನೆ :
ಎಚ್‌ಕೆಇ ಸಂಸ್ಥೆಯ ಶಿಕ್ಷಕರು ಸಮರ್ಪಿತ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಶಿಕ್ಷಕರ ಪರಿಶ್ರಮದ ಫಲವಾಗಿ ಈ ಬಾರಿ ಸಂಸ್ಥೆಯ ಹಲವು ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ನಮೋಶಿ ಹೇಳಿದರು.
ಮುಂದಿನ ದಿನಗಳಲ್ಲಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿಯ ಸಹಕಾರದೊಂದಿಗೆ ಎಚ್‌ಕೆಇ ಶಿಕ್ಷಣ ಸಂಸ್ಥೆಯನ್ನು ಗುಣಮಟ್ಟದ ಶಿಕ್ಷಣದಲ್ಲಿ ರಾಜ್ಯದ ಇತರ ಸಂಸ್ಥೆಗಳಿಗೆ ಮಾದರಿಯಾಗಿಸುವುದು ನಮ್ಮ ಗುರಿಯಾಗಿದೆ ಎಂದರು.
ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಹೆಚ್ಚುತ್ತಿರುವ ಒತ್ತಡದಿಂದಾಗಿ ಇತ್ತೀಚಿನ ದಿನಗಳಲ್ಲಿ 35–40ನೇ ವಯಸ್ಸಿನಲ್ಲಿಯೇ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಆರಂಭಿಕ ಹಂತದಲ್ಲಿಯೇ ಕಾಯಿಲೆಗಳನ್ನು ಪತ್ತೆಹಚ್ಚಿದರೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಆದ್ದರಿಂದ ಎಚ್‌ಕೆಇ ಸಂಸ್ಥೆಯ ಸದಸ್ಯರು ಅನಾರೋಗ್ಯ ಉಂಟಾಗುವವರೆಗೆ ಕಾಯದೆ ಬಸವೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಚ್‌ಕೆಇ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ :
ಎಚ್‌ಕೆಇ ಸದಸ್ಯರಿಗೆ ವಿಶೇಷ ಸೌಲಭ್ಯವಾಗಿ ಬಸವೇಶ್ವರ ಆಸ್ಪತ್ರೆಯ ವತಿಯಿಂದ 10,000 ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ವಿವಿಧ ಪರೀಕ್ಷೆಗಳನ್ನು ಒಳಗೊಂಡ ಸಮಗ್ರ ಎಕ್ಸಿಕ್ಯೂಟಿವ್ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಸಂಸ್ಥೆಯ ಸದಸ್ಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ವಿಶೇಷ ಆರೋಗ್ಯ ಯೋಜನೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಆಡಳಿತ ಮಂಡಳಿಯ 16 ಸದಸ್ಯರು ಹಾಗೂ ಸಹೋದ್ಯೋಗಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಯೋಜನೆಗೆ ಚಾಲನೆ ನೀಡಿದರು.
ಮುಂದಿನ ಹಂತದಲ್ಲಿ ಈ ಆರೋಗ್ಯ ತಪಾಸಣಾ ಸೌಲಭ್ಯವನ್ನು ಸಂಸ್ಥೆಯ ಎಲ್ಲ ಸಿಬ್ಬಂದಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀ. ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳ್ಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಸ ಪಾಟೀಲ, ಸಂಚಾಲಕ ಡಾ. ಕಿರಣ ದೇಶಮುಖ್, ಡಾ. ಶರಣಬಸಪ್ಪ ಹರವಾಳ, ಆಡಳಿತ ಮಂಡಳಿಯ ಸದಸ್ಯರು, ಡೀನ್ ಡಾ. ಶರಣಗೌಡ ಪಾಟೀಲ, ವೈಸ್ ಡೀನ್ ಡಾ. ವಿಜಯಕುಮಾರ್ ಕಪ್ಪೀಕೇರಿ, ವೈದ್ಯಾಧಿಕಾರಿಗಳಾದ ಡಾ. ಮಲ್ಲಿಕಾರ್ಜುನ್ ತೇಗನೂರ, ಡಾ. ಮಲ್ಲಿಕಾರ್ಜುನ್ ಬಂಡಾರ್, ಎಂ.ಆರ್. ಪೂಜಾರಿ, ಆಡಳಿತಾಧಿಕಾರಿಗಳಾದ ಡಾ. ಎಸ್.ಎಲ್. ಹಿರೇಮಠ, ಡಾ. ಜಯಶ್ರೀ ಮುದ್ದಾ ಸೇರಿದಂತೆ ವೈದ್ಯರು, ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು. ಶಶೀಕಲಾ ಜಡೆ ಕಾರ್ಯಕ್ರಮ ನಿರೂಪಿಸಿದರು.






