ಕಲಬುರಗಿ | ಕೆಕೆಆರ್‌ಡಿಬಿಯಲ್ಲಿ ಭ್ರಷ್ಟಾಚಾರದ ಆರೋಪ: 'ಕೋಣ'ವನ್ನು ಮೆರವಣಿಗೆ ನಡೆಸಿ ಆಕ್ರೋಶ

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಕೆಆರ್ ಡಿಬಿ) ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಅಹಿಂದ ಚಿಂತಕರ ವೇದಿಕೆ ಹಾಗೂ ಕಲ್ಯಾಣ ಕರ್ನಾಟಕ 371 (ಜೆ) ಕಲಂ ಕಾನೂನು ತಿದ್ದುಪಡಿ ಹೋರಾಟ ಸಮಿತಿ ವತಿಯಿಂದ ಮಂಗಳವಾರ, ಕೋಣ ಮೆರವಣಿಗೆ ನಡೆಸಿ, ವಿನೂತನ ಪ್ರತಿಭಟನೆ ನಡೆಸಲಾಯಿತು.
ನಗರದ ತಿಮ್ಮಾಪುರಿ ವೃತ್ತದಿಂದ ಐವಾನ್ ಎ ಶಾಹಿಯಲ್ಲಿರುವ ಕೆಕೆಆರ್ ಡಿಬಿ ಕಚೇರಿಯವರೆಗೆ ಕೋಣನ ಮೆರವಣಿಗೆ ಮಾಡುವ ಮೂಲಕ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆಯಲ್ಲೇ 'ಕೋಣ'ಕ್ಕೆ ಫೋಟೋ ಹಾಗೂ ಹೂವಿನ ಹಾರ ಹಾಕಿ, ಪ್ರತಿಭಟನಾಕಾರರು ಭ್ರಷ್ಟಾಚಾರ ಆಗಿರುವ ಬಗ್ಗೆ ತನಿಖೆಗೆ ಆಗ್ರಹಿಸಿದರು.
ಅಹಿಂದ ಸಂಘಟನೆಯ ಹೋರಾಟಗಾರ, ಅಧ್ಯಕ್ಷ ಸೈಬಣ್ಣ ಜಮಾದಾರ ಮಾತನಾಡಿ, 2023 ರಿಂದ ಈವರೆಗೆ ಯಾವುದೇ ಥರ್ಡ್ ಪಾರ್ಟಿ (ಮೂರನೇ ವ್ಯಕ್ತಿ) ವರದಿ ಇಲ್ಲದೆಯೇ ಸುಮಾರು 5,300 ಕೋಟಿ ರೂ. ಬಿಲ್ ಪಾವತಿಸಲಾಗಿದೆ. ಕೆ.ಟಿ.ಪಿ.ಪಿ. ಕಾಯ್ದೆ ಉಲ್ಲಂಘಿಸಿರುವ ಮಂಡಳಿಯ ಕಾರ್ಯದರ್ಶಿಗಳನ್ನು ಅಮಾನತುಗೊಳಿಸಬೇಕು. ಸುಳ್ಳು ಮಾಹಿತಿ ನೀಡಿ ಜನರಿಗೆ ದ್ರೋಹ ಎಸಗಿರುವ ಯೋಜನಾ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮಂಡಳಿಯ ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ಲೂಟಿಯಲ್ಲಿ ತೊಡಗಿದ್ದು, ಅವರ ವಿರುದ್ಧ ಸಮಗ್ರ ತನಿಖೆಯಾಗಬೇಕು ಎಂದು ಒತ್ತಡ ಹೇರಿದರು.
ಪ್ರತಿಭಟನೆಯಲ್ಲಿ ಯಶವಂತರಾವ್ ಸೂರ್ಯವಂಶಿ, ವಿಜಯ ಹಾದಿಮನಿ, ಪ್ರಕಾಶ್ ಹೊಟ್ಕರ್, ಸಂಜು ಹೊಡಲ್ಕರ್, ತಿಪ್ಪಣ್ಣ ಪವಾರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.







