ಕಲಬುರಗಿ | ಆಳಂದ ತಾಲೂಕಿನಾದ್ಯಂತ ನರೇಗಾ ಯೋಜನೆಯಡಿ ಭ್ರಷ್ಟಾಚಾರ : ಕ್ರಮಕ್ಕೆ ಸುಭಾಷ್ ಗುತ್ತೇದಾರ ಆಗ್ರಹ

ಕಲಬುರಗಿ : ಆಳಂದ ತಾಲೂಕಿನ ಹಾಳ ತಡಕಲ, ಮಾದನಹಿಪ್ಪರ್ಗಾ ಮತ್ತು ಕಡಗಂಚಿ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಗಳಲ್ಲಿ ಮನ್ ರೇಗಾ ಯೋಜನೆಯ ತೆರೆದ ಬಾವಿ ಕಾಮಗಾರಿಗಳಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ, ವಿದೇಶಗಳಲ್ಲಿರುವ, ಮಹಾರಾಷ್ಟ್ರದಲ್ಲಿ ವಾಸಿಸುವ ಕೂಲಿಕಾರರನ್ನು ಅಲ್ಲದೇ ಕಾಲೇಜು ಓದುತ್ತಿರುವ, ಬೇರೆ ಬೇರೆ ಕಂಪನಿಗಳಲ್ಲಿ ಕರ್ತವ್ಯದಲ್ಲಿರುವವರ ಹೆಸರನ್ನು ಸೇರಿಸಿ ಸುಳ್ಳು ಎನ್‍ಎಂಆರ್ ಗಳನ್ನು ಸೃಜಿಸಿ ಭ್ರಷ್ಟಾಚಾರ ನಡೆಸಿ ಸರ್ಕಾರದ ಹಣವನ್ನು ಲೂಟಿ ಮಾಡಿರುವ ಪಿಡಿಓ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸರ್ಕಾರದ ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಮರಣ ಹೊಂದಿದ ಫಲಾನುಭವಿಗಳ ಹೆಸರಿನಿಂದ ಕಾಮಗಾರಿಗಳನ್ನು ಮಂಜೂರು ಮಾಡಿರುತ್ತಾರೆ. ಉದ್ಯೋಗ ಖಾತ್ರಿ ನಿಯಮಗಳಲ್ಲಿ ಹೇಳಿರುವಂತೆ ಕುಟುಂಬಕ್ಕೆ ಒಂದು ಜಾಬ್ ಕಾರ್ಡ್ ನೀಡುವುದನ್ನು ಬಿಟ್ಟು ವೈಯಕ್ತಿಕವಾಗಿ ಒಬ್ಬರಿಗೊಂದು ಜಾಬ್ ಕಾರ್ಡ್ ನೀಡಿ ನಿಯಮಗಳನ್ನು ಉಲ್ಲಂಘಿಸಿರುತ್ತಾರೆ ಎಂದು ದೂರಿದರು.
ಶಾಸಕ ಬಿ.ಆರ್.ಪಾಟೀಲ್ ಅವರ ಚಿತಾವಣೆಯಿಂದ ಅವರ ಅಣ್ಣನ ಮಗ ಆರ್.ಕೆ.ಪಾಟೀಲ್ ಅಣತಿಯಂತೆ ತಾಲೂಕಿನಲ್ಲಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಮಾ.11, 2025ರಂದು ತಮ್ಮ ಶಾಲೆಯಲ್ಲಿ ಆರ್ ಕೆ ಪಾಟೀಲ ತಾಲೂಕಿನ ಇಒ, ತಾ.ಪಂ ಸಿಬ್ಬಂದಿ, ಉದ್ಯೋಗ ಖಾತ್ರಿ ಎಡಿ, ಟಿಎಪಿ, ಪಿಡಿಒ ಅವರನ್ನು ದಿನವಿಡೀ ಕೂಡಿಸಿಕೊಂಡು ಯಂತ್ರಗಳನ್ನು ಬಳಸಿ ತೆರೆದ ಬಾವಿ ಕಾಮಗಾರಿ ಮಾಡಲೇಬೇಕು ಎಂದು ಆದೇಶಿಸಿ ಭ್ರಷ್ಟಾಚಾರ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಶಾಸಕರು ಬೆಂಗಳೂರು, ದಿಲ್ಲಿ ಎಂದು ಓಡಾಡುತ್ತಾರೆ, ಸರ್ಕಾರಿ ಅಧಿಕಾರಿಗಳನ್ನು ದಿನವಿಡಿ ಕೂಡಿಸಿಕೊಳ್ಳಲು ಆರ್ ಕೆ ಪಾಟೀಲ್ ಯಾರು? ಇವರ ಅಣತಿಯಂತೆ ತಾಲೂಕು ಅಧಿಕಾರಿಗಳನ್ನು ಖಾಸಗಿಯಾಗಿ ನಡೆಸಿಕೊಳ್ಳುವುದು ಸರಿಯೇ ಎಂದು ಪ್ರಶ್ನಿಸಿದರು.
ಅದರಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಈ ತೆರೆದ ಬಾವಿ ಕಾಮಗಾರಿಗಳಲ್ಲಿ ಮನ್ ನರೇಗಾ ಯೋಜನೆಯ ತೆರೆದ ಬಾವಿ ಕಾಮಗಾರಿಗಳಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ, ವಿದೇಶ, ಮಹಾರಾಷ್ಟ್ರದಲ್ಲಿನ ವಿದ್ಯಾರ್ಥಿಗಳನ್ನು ಕೂಲಿಕಾರರೆಂದು ಸುಳ್ಳು ಎನ್‍ಎಂಆರ್‍ಗಳನ್ನು ಸೃಜಿಸಿ ಭ್ರಷ್ಟಾಚಾರ ನಡೆಸಿರುವ ಪಿಡಿಓ ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೂ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತೇವೆ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ(ಗ್ರಾ) ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ಶಿವರಾಜ ಪಾಟೀಲ ರದ್ದೇವಾಡಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಪ ಮಾಜಿ ಸದಸ್ಯ ಅಮರನಾಥ ಪಾಟೀಲ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಸಂತೋಷ ಹಾದಿಮನಿ, ಆನಂದರಾವ ಪಾಟೀಲ ಕೋರಹಳ್ಳಿ, ಹಣಮಂತ ಶೇರಿ ಸೇರಿದಂತೆ ಮತ್ತಿತರರು ಇದ್ದರು.
ಒಂದು ವಾರದೊಳಗಾಗಿ ಅಕ್ರಮ ಕಾಮಗಾರಿಗಳನ್ನು ತಡೆ ಹಿಡಿದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಕಚೇರಿಯ ಎದುರುಗಡೆ ಸಾವಿರಾರು ಕೂಲಿಕಾರರೊಂದಿಗೆ ಅನಿರ್ಧಿಷ್ಟಾವಧಿ ಧರಣಿ ಕೈಗೊಳ್ಳಲಾಗುವುದು.
-ಸುಭಾಷ್ ಆರ್.ಗುತ್ತೇದಾರ್ (ಮಾಜಿ ಶಾಸಕರು, ಆಳಂದ್)