ಕಲಬುರಗಿ | ಜಿಲ್ಲಾ ಕಸಾಪದಿಂದ ಒಂದು ದಿನದ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಕಲಬುರಗಿ : ಸಾಹಿತ್ಯ, ಸಂಸ್ಕೃತಿ ಪ್ರತಿಬಿಂಬಿಸುವ ಕಲಬುರಗಿ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಬಾಪೂಗೌಡ ದರ್ಶನಾಪೂರ ರಂಗಮಂದಿರ ಸಮ್ಮೇಳನಕ್ಕಾಗಿ ಸಜ್ಜುಗೊಂಡಿದೆ. ಈ ನೆಲದ ಸಾಂಸ್ಕೃತಿಕ ಪರಂಪರೆಯ ನೆಲದಲ್ಲಿ ಮಹಿಳಾ ಸಾಹಿತ್ಯದ ಸೊಗಡು ಅನಾವರಣಗೊಳ್ಳಲಿದೆ. ಕವಿರಾಜಮಾರ್ಗ ಕೃತಿ ಕೊಟ್ಟಿರುವ ತೊಗರಿ ಕಣಜದಲ್ಲಿ ಮಹಿಳಾ ಸಾಹಿತ್ಯದ ಅಸ್ಮಿತೆ ಕಾಣಬಹುದು.
ಹಿರಿಯ ಲೇಖಕಿ ಡಾ.ಶಾರದಾದೇವಿ ಜಾಧವ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನದಲ್ಲಿ ಮಹಿಳಾ ಸಾಹಿತ್ಯ ಚಿಂತನ-ಮoಥನಗಳ ಗೋಷ್ಠಿ ವಿಶೇಷವಾಗಿವೆ. ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಗರದ ವಿಧಾನ ಸೌಧದಿಂದ ಸರದಾರ ವಲ್ಲಭಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಕನ್ನಡ ಭವನದ ಅಂಗಳಕ್ಕೆ ತಲುಪಲಿದೆ. ಡೊಳ್ಳು ಕುಣಿತ, ಹಲಗೆ ವಾದನ, ಗೆಜ್ಜೆ ಮೇಳ, ಲಂಬಾಣಿ ನೃತ್ಯ, ಮಕ್ಕಳ ಕೋಲಾಟಗಳ ತಂಡಗಳು ಮೆರವಣಿಗೆಯಲ್ಲಿ ಕಳೆ ಕಟ್ಟಲಿವೆ.
ಕನ್ನಡ ಭವನ ಮದು ಮಗಳಂತೆ ಶೃಂಗಾರಗೊoಡಿದೆ. ತಳಿರು ತೋರಣ, ಆಕರ್ಷಕ ರಂಗೋಲಿಗಳ ಚಿತ್ತಾರ ಹಾಗೂ ಕನ್ನಡ ಧ್ವಜಗಳ ರಾರಾಜಿಸುವಿಕೆ. ಇಂಥ ಅಪರೂಪದ ಕ್ಷಣಗಳಿಗೆ ವೇದಿಕೆ ಸಜ್ಜಾಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರ ನೇತೃತ್ವದಲ್ಲಿ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಪ್ರಮುಖರಾದ ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ರಾಜೇಂದ್ರ ಮಾಡಬೂಳ, ರಮೇಶ ಜಾಧವ, ಧರ್ಮರಾಜ ಜವಳಿ, ಬಾಬುರಾವ ಪಾಟೀಲ ಅವರುಗಳು ಸಕಲ ಸಿದ್ಧತೆಗಳು ಮಾಡಿಕೊಳ್ಳುತ್ತಿದ್ದಾರೆ.
ಬೆಳಗ್ಗೆ 9.15 ಕ್ಕೆ ನಡೆಯುವ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆಗೆ ಡಿ.ಎಚ್.ಓ. ಡಾ.ಶರಣಬಸಪ್ಪ ಕ್ಯಾತನಾಳ ಚಾಲನೆ ನೀಡಲಿದ್ದಾರೆ. ನಾಡಿನ ಹಿರಿಯ ಸಾಹಿತಿ ಡಾ.ಸರಸ್ವತಿ ಚಿಮ್ಮಲಗಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಎಚ್.ಕೆ.ಇ. ಸಂಸ್ಥೆಯ ಉಪಾಧ್ಯಕ್ಷ ರಾಜು ಬಸವರಾಜ ಭೀಮಳ್ಳಿ, ಸಾಹಿತ್ಯ ಪ್ರೇರಕಿ ಸಂತೋಷಿರಾಣಿ ಪಾಟೀಲ ತೆಲ್ಕೂರ, ಕೃಷ್ಣಾಜೀ ಕುಲಕರ್ಣಿ ಉಪಸ್ಥಿರಿರುವರು.
ನಂತರ ನಡೆಯುವ ಗೋಷ್ಠಿಯಲ್ಲಿ ಡಾ.ಅಮೃತಾ ಕಟಕೆ ಯವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಮಹಿಳಾ ಸಾಹಿತ್ಯದ ಕುರಿತು ಡಾ. ಶೈಲಜಾ ಕೊಪ್ಪರ, ಮಹಿಳಾ ಅಸ್ಮಿತೆ ಕುರಿತು ಡಾ.ಇಂದುಮತಿ ಪಾಟೀಲ, ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ಡಾ.ಶಾಮಲಾ ಎಸ್ ಸ್ವಾಮಿ ಮಾತನಾಡಲಿದ್ದಾರೆ.
ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮಹಿಳಾ ಕವಿಗೋಷ್ಠಿಯಲ್ಲಿ ಆದಾರ್ಶ ಶಿಕ್ಷಕಿ ಉಷಾ ಗೊಬ್ಬೂರ ಆಶಯ ನುಡಿಗಳನ್ನಾಡುವರು. ಅನೇಕ ಅನುಭವಿ ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಲಿದ್ದಾರೆ.
ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಸಮಾರೋಪ ನುಡಿಗಳನ್ನಾಡಲಿದ್ದು, ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಶಿವಾನಂದ ಖಜೂರಗಿ, ಕಲ್ಯಾಣಕುಮಾರ ಶೀಲವಂತ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.
ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ಜರುಗಲಿದ್ದು, ಜಿಲ್ಲೆಯ ಮಹಿಳಾ ಕ್ಷೇತ್ರದ ದಿಗ್ಗಜರಾದ ಅನೇಕ ಲೇಖಕರನ್ನು ಸತ್ಕರಿಸಲಾಗುತ್ತಿದೆ.
ಕಾಯಕಜೀವಿ ಲಿಂಗೈಕ್ಯ ಶಕುಂತಲಾ ಬಸವರಾಜ ಭೀಮಳ್ಳಿ ಯವರ ವೇದಿಕೆಯಡಿಯಲ್ಲಿ ನಡೆಯುತ್ತಿರುವ ಸಮ್ಮೇಳನಕ್ಕೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ, ಡಾ.ಪ್ರಹ್ಲಾದ ಬುರ್ಲಿ, ಶರಣು ಹೊನ್ನಗೆಜ್ಜೆ ವಿಶೇಷ ಆಹ್ವಾನಿತರಾಗಿದ್ದಾರೆ.







