ಕಲಬುರಗಿ | ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಆರಂಭ

ಕಲಬುರಗಿ: ವಿಧಾನ ಪರಿಷತ್ ಪ್ರವೇಶಿಸುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಸಿದ್ಧತೆ ಆರಂಭವಾಗಿದೆ.
ಇದಕ್ಕೂ ಮುನ್ನ ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಮತ್ತು ಚುನಾವಣಾಧಿಕಾರಿ ಝಹೀರಾ ನಸೀಮ್ ಹಾಗೂ ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಯಿತು.
ಅ.23 ರಂದು ಮತದಾನ ನಡೆದಿತ್ತು. ಒಟ್ಟು 144 ಮತಪೆಟ್ಟಿಗೆ ತೆರೆಯುವ ಮತ್ತು ಮತಪತ್ರಗಳನ್ನು ಬಂಡ್ಲಿಂಗ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಎಲ್ಲ ಮತಪೆಟ್ಟಿಗೆಗಳನ್ನು ತೆರೆದು ಬಂಡ್ಲಿಂಗ್ ಪೂರ್ಣಗೊಳಿಸಿದ ನಂತರ ಬ್ಯಾಲೆಟ್ ಗಳ ರ್‍ಯಾಂಡಮೈಝೇಷನ್ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಬಳಿಕ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಪ್ರಾರಂಭವಾಗಲಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ, ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದ ಸಾಯಬಣ್ಣ ಮತ್ತು ಜನತಾದಳ (ಸಂಯುಕ್ತ) ಪಕ್ಷದ ಶಂಕರೆಡ್ಡಿ ಪಾಟೀಲ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ, ತುಳಸಪ್ಪ ದಾಸರ, ಮಹಬೂಬ್ ವಂಟೇಲಿ, ರಾಜಕುಮಾರ, ರಾಜು, ಶರಣಬಸಪ್ಪ, ಶಶಿಧರ, ಶಿವಶಂಕರ ಹಾಗೂ ಡಾ.ಸುರೇಶ ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತ ಎಣಿಕೆಯ ಪ್ರಕ್ರಿಯೆಯಲ್ಲಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಪ್ರಮುಖ ಹಂತವಾಗಿದ್ದು, ಅದರ ಫಲಿತಾಂಶದ ಆಧಾರದಲ್ಲಿ ಮುಂದಿನ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.






