ಕಲಬುರಗಿ| ಸಿಪಿಐ(ಎಂ) ಸಂಸ್ಥಾಪನಾ ದಿನಾಚರಣೆ

ಕಲಬುರಗಿ : ಜಿಲ್ಲೆಯ ಸಿಪಿಐಎಂ ಕಚೇರಿಯಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ, "ದುಡಿಯುವ ವರ್ಗವನ್ನು ಸಂಘಟಿಸುವ ಮತ್ತು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸಮಗ್ರ ಬದಲಾವಣೆಯ ಕ್ರಾಂತಿಯನ್ನು ನಡೆಸುವ ಸ್ಪಷ್ಟತೆಯೊಂದಿಗೆ ಮತ್ತು ದೇಶದ ಭೂಮಾಲಕ ಬಂಡವಾಳಶಾಹಿ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಕಿತ್ತೊಗೆದು ಶ್ರಮಜೀವಿಗಳ ಆಡಳಿತವನ್ನು ತರುವಲ್ಲಿ ಪಕ್ಷವು ಅವಿರತವಾಗಿ ದುಡಿಯಲು ಪಣ ತೊಟ್ಟು ಜನ್ಮ ತಳೆದಿದ್ದು ಸಿಪಿಐಎಂ ಪಕ್ಷವಾಗಿದೆ ಎಂದು ಹೇಳಿದರು.
ಶ್ರಮಜೀವಿಗಳ ಶ್ರಮವನ್ನು ಅತ್ಯಂತ ಕಡಿಮೆ ಬೆಲೆಗೆ ಲೂಟಿಗೈದು ಸಂಪತ್ತಿನ ಮೇಲೆ ನಿಯಂತ್ರಣ ಹೊಂದಿದ ಕಾರ್ಪೋರೆಟ್ ಲೋಕ ಮತ್ತು ಕೋಮುವಾದಿಗಳು -ಮೂಲಭೂತವಾದಿಗಳು ಒಗ್ಗೂಡಿ ದೇಶವನ್ನು ದಿವಾಳಿ ಮಾಡುತ್ತಿವೆ. ಸಿಪಿಐಎಂ ಪಕ್ಷವು ಜನತಾ ಪ್ರಜಾಪ್ರಭುತ್ವಕ್ಕಾಗಿ ಆರ್ಥಿಕ ಲೂಟಿಕೋರ ನೀತಿ ಮತ್ತು ಕೋಮುವಾದದ ದಾಳಿಯ ವಿರುದ್ಧ ರಾಜಿರಹಿತವಾಗಿ ಶ್ರಮಿಸುತ್ತಿದೆ. ತನ್ಮೂಲಕ ಜನತಾ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಹೋರಾಡುತ್ತಿದೆ ಎಂದ ಅವರು, ದೇಶದ ಐಕ್ಯತೆ, ಸಮಗ್ರತೆಗಾಗಿ, ಸೌಹಾರ್ದತೆ ಭ್ರಾತೃತ್ವಕ್ಕಾಗಿ ಪಣತೊಡುತ್ತಿದೆ ಎಂದರು.
ಇಂದು ದೇಶದ ಮುಂದೆ ಎಡಪಕ್ಷಗಳ ಐಕ್ಯತೆಯ ಮೂಲಕ ಜನತೆಯ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಅತ್ಯಂತ ಉತ್ತಮ ಆಡಳಿತ ಕೊಟ್ಟಿದ್ದು ಕೇರಳ ಸರಕಾರ. ಕಡುಬಡತನ ಮುಕ್ತ ರಾಜ್ಯವನ್ನಾಗಿ ಇದೇ ನವೆಂಬರ್ ಒಂದರoದು ಕೇರಳದ ಮುಖ್ಯಮಂತ್ರಿಗಳಾದ ಕಾ.ಪಿಣರಾಯ್ ವಿಜಯನ್ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ದೇಶವನ್ನು ನುಂಗಿ ನೊಣೆಯುತ್ತಿರುವ ಕೋಮುವಾದ ಮತ್ತು ಕಾರ್ಪೋರೆಟ್ ಕೂಟವು ಪ್ರಜಾಪ್ರಭುತ್ವೀಯ ಎಲ್ಲ ಸಂಸ್ಥೆಗಳನ್ನು ನಿರ್ನಾಮ ಮಾಡಿ ಸರ್ವಾಧಿಕಾರ ಪ್ರದರ್ಶಿಸುತ್ತಿದೆ. ಇದರಿಂದ ದೇಶವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಾಗಿದೆ. ಈ ಹೊತ್ತಿನಲ್ಲಿ ಪರ್ಯಾಯ ಆರ್ಥಿಕ ನೀತಿಯನ್ನು ಸಿಪಿಐಎಂ ಪಕ್ಷವು ದೇಶದ ಮುಂದೆ ಇಟ್ಟಿದೆ. ಮತಗಳ್ಳತನವು ಒಕ್ಕೂಟ ವ್ಯವಸ್ಥೆಯ ತಳಪಾಯವನ್ನೇ ಅಲ್ಲಾಡಿಸಿ ಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿಯಾದದ್ದು, ಸಿಪಿಐಎಂ ಪಕ್ಷವು ದೇಶದ ಸಂರಕ್ಷಣೆಗಾಗಿ, ಜನತೆಯ ಹಕ್ಕುಗಳಿಗಾಗಿ ದೇಶದ ಐಕ್ಯತೆಗಾಗಿ, ಭಾವೈಕ್ಯ ಪರಂಪರೆಯನ್ನು ಬಲಪಡಿಸಲು ನಿರಂತರ ಶ್ರಮಿಸಲು ಮುನ್ನುಗ್ಗುತ್ತಿದೆ ಎಂದು ಹೇಳಿದರು.
ಕಾ.ಮೇಘರಾಜ ಕಠಾರೆ ಇವರು ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ.ಪ್ರಭು ಖಾನಾಪುರೆ, ಜಿಲ್ಲಾ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ಭೀಮಶೆಟ್ಟಿ ಯಂಪಳ್ಳಿ, ಸುಧಮ ಧನ್ನಿ, ಶಾಂತಾ ಘಂಟಿ, ಮಹ್ಮದ್ ಮುಖದ್ದಮ್, ಲವಿತ್ರ ವಸ್ತ್ರದ್, ವಿರುಪಾಕ್ಷಪ್ಪ ತಡಕಲ್ಲ, ಪೀರಪ್ಪ ಪೂಜಾರಿ, ನಿಂಗಪ್ಪ ಹಾವನೂರ, ಮಲ್ಲಮ್ಮ ಕೋಡ್ಲಿ, ಶೇಕಮ್ಮ ಕುರಿ, ಪಾಂಡುರoಗ ಮಾವಿನಕರ್, ಸುಭಾಷ ಹೊಸಮನಿ, ಪ್ರಮೋದ್ ಪಾಂಚಾಳ ಮುಂತಾದವರು ಉಪಸ್ಥಿತರಿದ್ದರು.







