ಕಲಬುರಗಿ | ರಾಜ್ಯ ಬಜೆಟ್ ವಿರುದ್ಧ ಸಿಪಿಐಎಂ ಪ್ರತಿಭಟನೆ

ಕಲಬುರಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಬಂಡವಾಳ ಪರವಾಗಿದ್ದು, ಉದ್ಯೋಗ ಖಾತ್ರಿ ಯೋಜನೆಗೆ ಸಮರ್ಪಕ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ) ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಸಮಾಜವಾದಿ ಎನ್ನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಗಂಟೆಗಳ ಕಾಲ ಬಜೆಟ್ ಭಾಷಣ ಮಾಡಿದರೂ ಸಾಮಾನ್ಯ ಜನರ ಆರ್ಥಿಕ ಮಟ್ಟ ಹೆಚ್ಚಿಸುವುದು ಹಾಗೂ ನಿರುದ್ಯೋಗ ನಿವಾರಣೆಗೆ ಅಗತ್ಯವಾದ ಘೋಷಣೆಗಳನ್ನು ಮಾಡಲಿಲ್ಲ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯ ಹೆಸರನ್ನು ಬದಲಾಯಿಸಿ “ವಿಬಿ ಗ್ರಾಮ್ ಜಿ” ಯೋಜನೆ ಜಾರಿಗೆ ತಂದು ಕಾರ್ಮಿಕರ ಉದ್ಯೋಗ ಅವಕಾಶಗಳನ್ನು ಕಡಿಮೆ ಮಾಡಿದೆ. ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದರೂ, ಬಡ ಕೃಷಿ ಕಾರ್ಮಿಕರ ಉದ್ಯೋಗ ಭದ್ರತೆಗೆ ರಾಜ್ಯ ಬಜೆಟ್‌ನಲ್ಲಿ ಯಾವುದೇ ಭರವಸೆ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿರುವ ಸಾಧನೆಯನ್ನು ಹೇಳಿಕೊಂಡರೂ ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚಿನ ಅನುದಾನ ನೀಡಿಲ್ಲ. ಕೇಂದ್ರ ಸರ್ಕಾರ ತಂದಿರುವ ಹೊಸ ಕಾಯ್ದೆಯಿಂದ ಹಿಂದಿನ ಉದ್ಯೋಗ ಖಾತ್ರಿ ಯೋಜನೆ ದುರ್ಬಲಗೊಂಡಿದ್ದು, ಕಾಂಗ್ರೆಸ್ ಸರ್ಕಾರವೂ ಅದೇ ದಾರಿಯಲ್ಲಿ ನಡೆಯುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕೆ. ನೀಲಾ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಗೌರಮ್ಮ, ಸರ್ವೇಶ್, ಭೀಮಶೆಟ್ಟಿ ಯಂಪಳ್ಳಿ ಸೇರಿದಂತೆ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.







