ಕಲಬುರಗಿ | ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಸಿಪಿಎಂ ಪ್ರತಿಭಟನೆ

ಕಲಬುರಗಿ: ವೆನೆಜುವೆಲಾ ದೇಶದ ವಿವಿಧ ಸ್ಥಳಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವ ಕೃತ್ಯನ್ನು ಖಂಡಿಸಿ ಸಿಪಿಎಂ ವತಿಯಿಂದ ಇಲ್ಲಿನ ತಿಮ್ಮಾಪುರಿ ಚೌಕ್ ಸಮೀಪ ರವಿವಾರ ಪ್ರತಿಭಟನೆ ನಡೆಯಿತು.
ಕೆಲವು ವಾರಗಳಿಂದ ಅಮೆರಿಕವು ವೆನೆಜುವೆಲಾದಲ್ಲಿ ಆಳ್ವಿಕೆಯನ್ನು ಬದಲಾಯಿಸಲು ಬಲವಂತವಾಗಿ ಆ ದೇಶದ ಸುತ್ತಲೂ ತನ್ನ ಮಿಲಿಟರಿ ಮತ್ತು ನೌಕಾಪಡೆಗಳನ್ನು ಸಜ್ಜುಗೊಳಿಸಿದೆ. ಇಡೀ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ವೆನೆಜುವೆಲಾದ ಮೇಲೆ ದಾಳಿ ನಡೆಸಿದೆ. ಇದನ್ನು ಭಾರತ ದೇಶ ಸೇರಿದಂತೆ ಇಡೀ ವಿಶ್ವದ ಎಲ್ಲ ರಾಷ್ಟ್ರಗಳು ಖಂಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅಮೆರಿಕದ ಆಕ್ರಮಣವನ್ನು ವಿಶ್ವಸಂಸ್ಥೆ ಖಂಡಿಸಬೇಕು, ಅದಕ್ಕಾಗಿ ನಿರ್ಣಯ ತೆಗೆದುಕೊಂಡು ದಾಳಿಯನ್ನು ತಕ್ಷಣವೇ ನಿಲ್ಲಿಸುವಂತೆ ಅಮೆರಿಕದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಡಾ.ಮೀನಾಕ್ಷಿ ಬಾಳಿ, ಪಾಂಡುರಂಗ ಮಾವಿನಕರ, ಎಂ. ಬಿ ಸಜ್ಜನ್, ಲವಿತ್ರ ವಸ್ತ್ರದ್, ಬಾಬು ಹೂವಿನಹಳ್ಳಿ, ಪದ್ಮಿನಿ ಕಿರಣಗಿ, ಕೋದಂಡರಾಮ, ಶೇಖಮ್ಮ ಕುರಿ, ಲಲಿತಾ, ಸಲ್ಮಾನ್ ಖಾನ್ ಆಳಂದ, ಕೆ.ಎಸ್.ಶಾರದಾ, ಸರ್ವೇಶ್, ನಾಗಪ್ಪ ರಾಯಚೂರು, ಯಶವಂತ ಪಾಟೀಲ್, ಪ್ರಮೋದ್ ಪಾಂಚಾಳ, ಭೀಮಶೆಟ್ಟಿ ಯಂಪಳ್ಳಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.







