Kalaburagi | ಕಮಲಾಪುರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಸಿಪಿಐ(ಎಂ) ಪ್ರತಿಭಟನೆ

ಕಲಬುರಗಿ : ಕಮಲಾಪುರ ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಜನರಿಗೆ ಪರಿಹಾರ ಮತ್ತು ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿ.ಕೆ. ಸಲಗರ ಗ್ರಾಮದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.
ಗ್ರಾಮ ಪಂಚಾಯಿತಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರೈತರು, ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು ಪಾಲ್ಗೊಂಡು ನಾಡ ತಹಸೀಲ್ದಾರ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವುದು, ರೈತರ ಸಾಲ ಮನ್ನಾ, ಬೆಳೆ ವಿಮೆ ಪರಿಹಾರ ಬಿಡುಗಡೆ, ಮನರೇಗಾ ಯೋಜನೆಯಡಿ 200 ದಿನಗಳ ಉದ್ಯೋಗ, ಜಾನುವಾರುಗಳಿಗೆ ಮೇವು-ನೀರಿನ ಕೇಂದ್ರ ಆರಂಭ, ಕೂಲಿಗಾಗಿ ಕಾಳು ಯೋಜನೆ ಜಾರಿ, ಬರ ಪರಿಹಾರ ಕಾಮಗಾರಿಗಳ ಆರಂಭ ಹಾಗೂ ಸಾಮಾಜಿಕ ಭದ್ರತಾ ಪಿಂಚಣಿಗಳ ನಿಯಮಿತ ಪಾವತಿ ಸೇರಿದಂತೆ 16 ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ಬೆಲೆ ಏರಿಕೆ ನಿಯಂತ್ರಣ, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಮನರೇಗಾ ಅರ್ಜಿಗಳ ಕಡ್ಡಾಯ ಸ್ವೀಕಾರ ಹಾಗೂ ಗ್ರಾಮಗಳ ಮೂಲಸೌಕರ್ಯ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಆಗ್ರಹಿಸಿದರು.
ರೈತರ ಬೆಳೆ ನಷ್ಟಕ್ಕೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ವಿ.ಕೆ. ಸಲಗರ ಗ್ರಾಮ ಆಸ್ಪತ್ರೆಯಲ್ಲಿ ಪ್ರತಿದಿನ ವೈದ್ಯರ ಸೇವೆ ಕಲ್ಪಿಸಬೇಕು. ಮನರೇಗಾ ಯೋಜನೆ ದುರ್ಬಲಗೊಂಡ ಪರಿಣಾಮ ಗ್ರಾಮೀಣ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಬರ ಪರಿಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯದರ್ಶಿ ಮೆಹಬೂಬ್ ಶಾ ಮಾತನಾಡಿದರು.
ಪ್ರತಿಭಟನೆ ಬಳಿಕ ಅಧಿಕಾರಿಗಳು ಗ್ರಾಮದಲ್ಲಿನ ಸಮಸ್ಯೆಗಳ ಸ್ಥಳ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯದರ್ಶಿ ಮೆಹಬೂಬ್ ಶಾ, ಗ್ರಾಮ ಕಾರ್ಯದರ್ಶಿ ಶಿವಕುಮಾರ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಪಾಂಡುರಂಗ ಮಾವಿನಕರ್, ಶಿವಶರಣಪ್ಪ ಧನ್ನೂರ, ಬಾಬು ಮಾಂಜರಕರ, ಕಮಲಾಕರ, ಅಪ್ಪಾರಾಯ ವಾಡಿ ಸೇರಿದಂತೆ ಇತರ ಮುಖಂಡರು ವಹಿಸಿದ್ದರು.






