ಕಲಬುರಗಿ | ಆರೆಸ್ಸೆಸ್ ನಡೆಸುವ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪಕ್ಕೆ ಸಿಪಿಐ(ಎಂ) ಬೆಂಬಲ: ಕೆ.ನೀಲಾ

ಕಲಬುರಗಿ: ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ನಡೆಸುವ ಚಟುವಟಿಕೆಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬೆಂಬಲಿಸುತ್ತದೆ. ಆದರೆ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಮಾಜ, ಸರ್ಕಾರ ಸನ್ನದ್ಧವಾಗಬೇಕೆ ಹೊರತು ಸಂಘಟನೆಗಳ ಮೇಲೆ ನಿಷೇಧ ಹೇರುವುದು ಪರಿಹಾರವಲ್ಲ ಎಂದು ಕಲಬುರಗಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹುತ್ವವೇ ಜೀವಾಳವಾಗಿರುವ ಭಾರತವನ್ನು ಹಿಂದುತ್ವ ವಾದದ ಮೂಲಕ ಏಕ ಧರ್ಮವನ್ನು ಹೇರುವ ಕನಸಿನಲ್ಲಿ ಮುನ್ನಡೆಯುತ್ತಿರುವ ಆರೆಸ್ಸೆಸ್ ಗೆ ಈಗ ಶತಮಾನ. ಈ ಹೊತ್ತಿನಲ್ಲಿ ಅದು ತಾನು ಮತ್ತು ತನ್ನ ಅಂಗಸಂಸ್ಥೆಗಳ ಮೂಲಕ ನಡೆಸಿಕೊಂಡು ಬಂದಿರುವ ಚಟುವಟಿಕೆಗಳನ್ನು ಅವಲೋಕಿಸಿದರೆ ಜನರನ್ನು ಭಾವನಾತ್ಮಕವಾಗಿ ಸೆಳೆದು ಧರ್ಮಾಧಾರಿತ ವಿಭಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಎಳೆ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ಅವರು ನಡೆಸುವ ಚಟುವಟಿಕೆಗಳು ಭವಿಷ್ಯದ ಭಾರತವನ್ನು ಕೋಮುದ್ವೇಷದ ಜ್ವಾಲಾಮುಖಿಯಾಗಿ ಮಾರ್ಪಡಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ, ಮೆರವಣಿಗೆಗಳನ್ನು ನಡೆಸಲು ನಿರ್ಬಂಧವಿದೆ ಎಂದು ಹೇಳಿ ತಡೆ ಒಡ್ಡುವ, ಪ್ರಕರಣ ದಾಖಲಿಸುವ ನಗರ ಪೊಲೀಸ್ ಇಲಾಖೆ ಆರ್‌ಎಸ್‌ಎಸ್‌ಗೆ ಪಥಸಂಚಲನಕ್ಕೆ ಅನುಮತಿ ನೀಡಿ ಸಂಚಾರ ನಿರ್ಬಂಧ ಹೇರಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆಸಿಕೊಟ್ಟ ಘಟನೆ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇವರದು, ಅಧಿಕಾರ ಅವರದು ಎಂಬಂತಹ ಸ್ಥಿತಿ ಇದೆ ಎಂದಿದ್ದಾರೆ.
ಇವೆಲ್ಲವನ್ನೂ ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಪಾದಿಸುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಲು ಕಂಕಣಬದ್ಧವಾಗಬೇಕು. ಸಹಬಾಳ್ವೆಯ ಸಾಮರಸ್ಯದ ಮೌಲ್ಯಗಳನ್ನು ಸ್ಥಿರವಾಗಿಸಲು ಜನರನ್ನು ಅಣಿಕರೆಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







