Kalaburagi | ಕೆಬಿಎನ್ ಆಸ್ಪತ್ರೆಯಲ್ಲಿ ಸಿಪಿಆರ್ ಜಾಗೃತಿ ಕಾರ್ಯಕ್ರಮ

ಕಲಬುರಗಿ: ಹೃದಯ-ಶ್ವಾಸಕೋಶ ಪುನಶ್ಚೇತನ (ಸಿಪಿಆರ್) ದಿನದ ಅಂಗವಾಗಿ ನಗರದ ಕೆಬಿಎನ್ ಆಸ್ಪತ್ರೆಯ ಮಕ್ಕಳ ವಿಭಾಗ ಹಾಗೂ ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) ಸಹಯೋಗದಲ್ಲಿ ಮಂಗಳವಾರ ಸಿಪಿಆರ್ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ ಮಾತನಾಡಿ, ಸಿಪಿಆರ್‌ನ ಮಹತ್ವ, ಯಾವ ಸಂದರ್ಭಗಳಲ್ಲಿ ಅದನ್ನು ನೀಡಬೇಕು ಹಾಗೂ ಸರಿಯಾದ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಭಾರತದಲ್ಲಿ ಸಿಪಿಆರ್ ಕುರಿತು ಸಾರ್ವಜನಿಕರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಮಕ್ಕಳ ವಿಭಾಗದ ಪ್ರಾಧ್ಯಾಪಕ ಡಾ. ಚರಣರಾಜ ಅವರು ಮಕ್ಕಳಿಗೆ ಸಿಪಿಆರ್ ನೀಡುವ ವಿಧಾನ ಹಾಗೂ ತುರ್ತು ಸಂದರ್ಭಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಡಾ. ವಿಜಯ ಅವರು ಉಸಿರುಗಟ್ಟುವಿಕೆ (ಚೋಕಿಂಗ್) ಉಂಟಾದಾಗ ಕೈಗೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸೆ ಮತ್ತು ಸಿಪಿಆರ್ ವಿಧಾನವನ್ನು ವಿವರಿಸಿದರು.
ವೈದ್ಯಕೀಯ ಕಾಲೇಜಿನ ಡೀನ್ ಡಾ. ಗುರುಪ್ರಸಾದ ಕಾರ್ಯಕ್ರಮವನ್ನು ಶ್ಲಾಘಿಸಿ, ಮಕ್ಕಳ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಅಣಕು ಪ್ರದರ್ಶನದ ಮೂಲಕ ಸಿಬ್ಬಂದಿ ತೋರಿದ ಸಮಯಪ್ರಜ್ಞೆ ಮತ್ತು ಕಾರ್ಯಕ್ಷಮತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಿಪಿಆರ್ ಕುರಿತು ಹ್ಯಾಂಡ್ಸ್-ಆನ್ ತರಬೇತಿ ನೀಡಲಾಗಿದ್ದು, ತರಬೇತುದಾರರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ವತಃ ಸಿಪಿಆರ್ ಅಭ್ಯಾಸ ನಡೆಸಿದರು.
ಇದೇ ವೇಳೆ, ತುರ್ತು ಪರಿಸ್ಥಿತಿಯಲ್ಲಿ ಹಿರಿಯ ಸ್ನಾತಕೋತ್ತರ ವೈದ್ಯರು ರೋಗಿಗೆ ಸ್ಟ್ರೆಚರ್‌ನಲ್ಲಿಯೇ ಸಿಪಿಆರ್ ನೀಡುತ್ತ ಚಿಕಿತ್ಸೆಗಾಗಿ ಕರೆದೊಯ್ಯುವ ಸಿಸಿಟಿವಿ ದೃಶ್ಯಾವಳಿಯನ್ನು ಪ್ರದರ್ಶಿಸಿ, ತುರ್ತು ಸಂದರ್ಭಗಳಲ್ಲಿ ಸಿಪಿಆರ್‌ನ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.
ಕಾರ್ಯಕ್ರಮವನ್ನು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ ಉಪಳಾವ್ಕರ್ ನಿರೂಪಿಸಿದರು. ಆಡಳಿತಾಧಿಕಾರಿ ಡಾ. ರಾಧಿಕಾ, ಡಾ. ರಾಜು ಮಾಳಿ, ವೈದ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.






