Kalaburagi | ಜು.4ರಂದು ‘ಕಾಲದ ಕಟ್ಟಳೆ ಮೀರಿ’ ವಿಮರ್ಶಾ ಕೃತಿ ಲೋಕಾರ್ಪಣೆ

ಕಲಬುರಗಿ : ಯುವ ಬರಹಗಾರ ಡಾ.ಪಿ.ನಂದಕುಮಾರ್ ಅವರು ರಚಿತದ ‘ಕಾಲದ ಕಟ್ಟಳೆ ಮೀರಿ’ ಎಂಬ ವಿಮರ್ಶಾ ಕೃತಿ ಲೋಕಾರ್ಪಣೆ ಕಾರ್ಯಕ್ರಮವು ಜು.4ರಂದು ಬೆಳಿಗ್ಗೆ 10.30ಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರು ಮೂಲದ ಕೌದಿ ಪ್ರಕಾಶನ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕರು ಹಾಗೂ ಜಾನಪದ ವಿದ್ವಾಂಸ ಪ್ರೊ.ಎಚ್.ಟಿ.ಪೋತೆ ಅವರು ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಹೋರಾಟಗಾರ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ.ರಾ.ದ.ಸಂ.ಸ.) ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಾಧ್ಯಾಪಕರು ಹಾಗೂ ಬರಹಗಾರ ಡಾ.ಅರುಣ್ ಜೋಳದಕೂಡ್ಲಗಿ ಅವರು ಕೃತಿ ಪರಿಚಯಿಸಲಿದ್ದು, ಆರೋಗ್ಯ ಇಲಾಖೆಯ ನಿವೃತ್ತ ನೌಕರ ಅಮೃತರಾವ್ ಹಿರೇಮನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೃತಿಕಾರ ಡಾ.ಪಿ.ನಂದಕುಮಾರ್, ಕೌದಿ ಪ್ರಕಾಶನದ ಪ್ರಕಾಶಕರಾದ ಡಾ.ಮಮತಾ ಕೆ.ಎನ್., ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು, ಅಧ್ಯಾಪಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು.
ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ಕೋರಿದ್ದಾರೆ.






