Kalaburagi | ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರಿಗೆ ಸನ್ಮಾನ

ಕಲಬುರಗಿ: ಪ್ರತಿಷ್ಠಿತ ‘ಪದ್ಮಭೂಷಣ ಡಾ. ಮುರಳಿ ಮನೋಹರ ಜೋಶಿ ವಿಶಿಷ್ಟ ಶಿಕ್ಷಕ ಸಮ್ಮಾನ್–2026’ ಪ್ರಶಸ್ತಿ ಸ್ವೀಕರಿಸಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅವರನ್ನು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ (ಎ.ಬಿ.ಆರ್.ಎಸ್.ಎಂ.) ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ನವದೆಹಲಿಯಲ್ಲಿ ನ. 22ರಂದು ನಡೆದ ಫೆಡರೇಶನ್ ಫಾರ್ ವರ್ಲ್ಡ್ ಅಕಾಡೆಮಿಕ್ಸ್‌ನ 9ನೇ ವಾರ್ಷಿಕ ಸಮ್ಮೇಳನದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಉನ್ನತ ಶಿಕ್ಷಣ ಕ್ಷೇತ್ರಕ್ಕೆ, ವಿಶೇಷವಾಗಿ ರಸಾಯನಶಾಸ್ತ್ರ ಶಿಕ್ಷಣ ಮತ್ತು ಸಂಶೋಧನೆಗೆ ನೀಡಿದ ಜೀವಮಾನದ ಕೊಡುಗೆ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ನೀಡಿದ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವಿಶ್ವವಿದ್ಯಾಲಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಎ.ಬಿ.ಆರ್.ಎಸ್.ಎಂ. ಪದಾಧಿಕಾರಿಗಳಾದ ಪ್ರೊ. ಚನ್ನವೀರ ಆರ್.ಎಂ., ಪ್ರೊ. ದೇವರಾಜಪ್ಪ ಎಸ್., ಡಾ. ಗಣಪತಿ ಬಿ. ಸಿನ್ನೂರ ಸೇರಿದಂತೆ ವಿವಿಧ ವಿಭಾಗಗಳ ಡೀನರು, ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.




