Kalaburagi | ಕನ್ನಡ ಭಾಷೆ ಉಳಿವಿಗೆ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಗತ್ಯ: ರಾಜೇಶ ಗುತ್ತೇದಾರ

ಕಲಬುರಗಿ : ಶಾಲೆಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುವುದರಿಂದ ಭಾರತೀಯ ಸಂಸ್ಕೃತಿ, ಸಾಹಿತ್ಯ ಮತ್ತು ಭಾಷೆಯ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ರಾಜೇಶ ಜಗದೇವ ಗುತ್ತೇದಾರ ಹೇಳಿದರು.
ನಗರದ ಕನ್ನಡ ಭವನದ ಬಾಪೂಗೌಡ ದರ್ಶನಾಪೂರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಆಯೋಜಿಸಿದ್ದ “ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ಅಭಿಮಾನ ಬೆಳೆಸಿಕೊಳ್ಳಬೇಕು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದ್ದು, ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯದ ನಿರ್ಮಾತೃಗಳು. ವಿದ್ಯಾಭ್ಯಾಸದ ಜೊತೆಗೆ ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಶೋಧಕ ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿ, ಅಂಕಗಳು ಮಾತ್ರ ಮುಖ್ಯವಲ್ಲ, ಜ್ಞಾನವೇ ಜೀವನಕ್ಕೆ ಪೂರಕವಾಗಬೇಕು. ಹತ್ತನೇ ತರಗತಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಹಾಗೂ ಸರಳ ಭಾಷೆಯಾಗಿದೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿಯೂ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ, ಮಹೇಶ ಹೂಗಾರ, ವಿದ್ಯಾಸಾಗರ ದೇಶಮುಖ, ಲಿಂಗರಾಜ ಸಿರಗಾಪೂರ, ಧರ್ಮರಾಜ ಜವಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು 220ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ “ಹತ್ತರ ಕನ್ನಡಕೆ ಗುಣಾಗ್ರಣಿ ಪ್ರಶಸ್ತಿ” ಪ್ರದಾನ ಮಾಡಲಾಯಿತು.






