ಕಲಬುರಗಿ | ಸಂಸ್ಕೃತಿ ಉತ್ಸವ ಬಸವಾದಿ ಶರಣ ಸಿದ್ಧಾಂತಕ್ಕೆ ವಿರೋಧಿ : ಮೀನಾಕ್ಷಿ ಬಾಳಿ ಆರೋಪ

ಕಲಬುರಗಿ : ಸೇಡಂನ ಹೊರ ವಲಯದ ಬೀರನಹಳ್ಳಿ ಕ್ರಾಸ್ನಲ್ಲಿ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವವು ಬಸವಾದಿ ಶರಣ ಸಿದ್ಧಾಂತಕ್ಕೆ ವಿರೋಧಿಯಾಗಿದೆ ಎಂದು ಸೌಹಾರ್ದ ಕರ್ನಾಟಕ ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ಅರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಎಸೆಸ್ಸ್ ತತ್ವಗಳನ್ನು ಜನಮಾನಸದಲ್ಲಿ ಬೇರೂರಿಸುವ ತಂತ್ರಗಾರಿಕೆ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸಿಎಂ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಉತ್ಸವದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಬಿಜೆಪಿಯೇತರ ರಾಜಕೀಯ ಮುಖಂಡರು ಹಾಗೂ ಮಠಾಧೀಶರಿಗೊಂದು ಉತ್ಸವಕ್ಕೆ ಹೋಗದಂತೆ ಬಹಿರಂಗ ಪತ್ರ ಬರೆದು ಕಳುಹಿಸಿಕೊಡಲಾಗುತ್ತಿದೆ ಎಂದರು.
ಈ ಉತ್ಸವವು ಲಿಂಗಾಯತ ಹಾಗೂ ಹಿಂದುಳಿದ ಮಠಾಧೀಶರನ್ನು ಓಲೈಸುವುದು ಪ್ರಧಾನ ಕೆಲಸವಾಗಿದ್ದು, ಬಿಜೆಪಿ ಆಪರೇಷನ್ ಕಮಲ ಮಾಡುತ್ತ ಸಂಸ್ಕೃತಿ ರಕ್ಷಣೆ ಹೆಸರಲ್ಲಿ ಆಪರೇಷನ್ ಲಿಂಗಾಯತ, ಹಿಂದುಳಿದ ಮಠಾಧೀಶ ಕಮಲ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದ್ದಾರೆ.
ಮಠಾಧೀಶರು ಬಸವ ತತ್ವಗಳ ಪೋಷಕರಾಗಬೇಕೆ ಹೊರತು ಸನಾತನಿಗಳ ಬಾಳಬಡುಕರಾಗಬಾರದು, ನಮ್ಮ ಅನೇಕ ಸ್ವಾಮಿಗಳು ಮತ್ತು ಸಾಮಾನ್ಯ ಲಿಂಗಾಯತರಿಗೆ ಕುಂಭಮೇಳಕ್ಕೆ ಉದ್ದೇಶಪೂರ್ವಕ ಆಹ್ವಾನಿಸಿದ್ದಾರೆ. ಅಲ್ಲದೆ ' ವಚನ ದರ್ಶನ ' ಎಂದು ಪುಸ್ತಕ ಬರೆದು ಶರಣ ತತ್ವಗಳನ್ನು ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಸಂಚಾಲಕ ಪ್ರೊ.ಆರ್.ಕೆ ಹುಡಗಿ ಮಾತನಾಡಿ, 500 ಕೋಟಿ ರೂ. ವೆಚ್ಚದಲ್ಲಿ ಈ ಸಂಸ್ಕೃತಿ ಉತ್ಸವ ಕಾರ್ಯಕ್ರಮ ಜರುಗುತ್ತಿದೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಎಂಬ ಸಂಶಯ ಬಹಳಷ್ಟು ಜನರಿಗೆ ಮೂಡುತ್ತಿದೆ. ಭಾರತೀಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಮುಖ್ಯ ಉದ್ದೇಶ, ಆರ್ಎಸೆಸ್ಸ್ ತತ್ವಗಳನ್ನು ದಕ್ಷಿಣ ಭಾರತದೊಳಗೆ ನುಗ್ಗಿಸುವ ಪ್ರಯತ್ನವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಬ್ದುಲ್ ರಹೀಂ, ರವಿ ಸಜ್ಜನ್, ಮಾರುತಿ ಗೋಖಲೆ, ಲವಿತ್ರ ವಸ್ತ್ರದ್ ಸೇರಿದಂತೆ ಇತರರು ಇದ್ದರು.







