ಕಲಬುರಗಿ | ಸೈಬರ್ ವಂಚನೆ ಆರೋಪ : ಪ್ರಕರಣ ದಾಖಲು

ಕಲಬುರಗಿ: ಹಣ ಲೇವಾದೇವಿ ಪ್ರಕರಣವಿದೆ ಎಂದು ಹೆದರಿಸಿ ಇಲ್ಲಿನ ಇಎಸ್ಐ ಡೆಂಟಲ್ ಕಾಲೇಜಿನ ಸಹ ಪ್ರಾಧ್ಯಾಪಕಿಯೊಬ್ಬರ ಬಳಿ ಸೈಬರ್ ವಂಚಕರು 99 ಸಾವಿರ ರೂ. ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಇಎಸ್‌ಐ ಆಸ್ಪತ್ರೆಯ ಸಹ ಪ್ರಾಧ್ಯಾಪಕಿ ದೀಪಲಕ್ಷ್ಮಿ ಸೋಮಶೇಖರ ಎಂಬಾತರೆ ವಂಚನೆಗೆ ಒಳಗಾದವರು ಎಂದು ತಿಳಿದುಬಂದಿದೆ. ಈ ಕುರಿತು ಕರೆ ಮಾಡಿ ವಂಚಿಸಿರುವ ಇಬ್ಬರು ಅಪರಿಚಿತ ಸೈಬರ್ ವಂಚಕರ ವಿರುದ್ಧ ಇಲ್ಲಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಹಾಗೂ ಮುಂಬೈ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿದ ಸೈಬರ್ ವಂಚಕರು, ನಿಮ್ಮ ಹೆಸರಿನಲ್ಲಿ ಬರೀ ಸಿಮ್ ಖರೀದಿಸಿದ್ದಲ್ಲದೇ, ನಿಮ್ಮ ವಿರುದ್ಧ ಅಕ್ರಮ ಹಣ ಲೇವಾದೇವಿ ಪ್ರಕರಣ ದಾಖಲಾಗಿದೆ. ನಿಮ್ಮೊಂದಿಗೆ ವಾಟ್ಸ್‌ಆ್ಯಪ್ ಕಾಲ್‌ನಲ್ಲಿ ನಮ್ಮ ಹಿರಿಯ ಅಧಿಕಾರಿ ಮಾತನಾಡುತ್ತಾರೆ ಎಂದು ಬೇರೊಬ್ಬರು ಅಧಿಕಾರಿಯಂತೆ ಮಾತನಾಡಿ, 99,999 ರೂ. ಗೂಗಲ್ ಪೇ ಮುಖಾಂತರ ಹಣ ಹಾಕಿಸಿಕೊಂಡು ವಂಚಿಸಿದ್ದಾರೆ ಎಂದು ಸಹ ಪ್ರಾಧ್ಯಾಪಕಿ ದೀಪಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ದೀಪಲಕ್ಷ್ಮಿ ಅವರ ದೂರಿನನ್ವಯ ನಗರದ ಸೆನ್ ಠಾಣೆ ಪೊಲೀಸರು ಇಬ್ಬರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.





