ಕಲಬುರಗಿ | ಆರೆಸ್ಸೆಸ್ ಪಥಸಂಚಲನಕ್ಕೆ ಪರ್ಯಾಯವಾಗಿ ಸಂವಿಧಾನ ಸಮರ್ಪಣಾ ದಿನ ಆಚರಣೆಗೆ ದಲಿತ ಸಂಘಟನೆಗಳ ನಿರ್ಧಾರ

ಕಲಬುರಗಿ: ಚಿತ್ತಾಪುರದಲ್ಲಿ ನ.16ರಂದು ನಡೆಯಲಿರುವ ಆರೆಸ್ಸೆಸ್ ಪಥಸಂಚಲನಕ್ಕೆ ಪರ್ಯಾಯವಾಗಿ ಚಿತ್ತಾಪುರದಲ್ಲೆ ನ.26 ರಂದು ಸಂವಿಧಾನ ಸಮರ್ಪಣಾ ದಿನ ಆಚರಣೆಗೆ ನಿರ್ಧಾರ ಕೈಗೊಂಡಿದ್ದು, ಅದೇ ದಿನ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದ್ದಾರೆ.
ಇಲ್ಲಿನ ಐವಾನ್ ಎ ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಬೆಳಗ್ಗೆ ಭಾರತೀಯ ದಲಿತ ಪ್ಯಾಂಥರ್, ಭೀಮ್ ಆರ್ಮಿ ಹಾಗೂ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ದಲಿತಪರ, ರೈತಪರ ಸಂಘಟನೆಗಳು ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ನ್ಯಾಯಾಲಯದ ಸಮ್ಮುಖದಲ್ಲಿ ಜಿಲ್ಲಾಡಳಿತ ನ.16ರಂದು ಪಥಸಂಚಲಕ್ಕೆ ಆರೆಸ್ಸೆಸ್ ಗೆ ಅನುಮತಿ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಅದೇ ದಿನ ವಿವಿಧ ದಲಿತಪರ ಸಂಘಟನೆಗಳು ಪಥಸಂಚಲನ, ಮೆರವಣಿಗೆ ನಡೆಸಲು ನಿರ್ಧರಿಸಿದ್ದವು. ಆದರೆ, ಈಗ ಆರೆಸ್ಸೆಸ್ ಪಥಸಂಚಲನಕ್ಕೆ ಪರ್ಯಾಯವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿದ ಸ್ಮರಣಾರ್ಥ ನ.26ರಂದು ಸಂವಿಧಾನ ಸಮಾವೇಶ ನಡೆಸಲಿದ್ದು, ಈ ವೇಳೆ ಸಾವಿರಾರು ಜನ ಸೇರಲಿದ್ದಾರೆ ಎಂದರು.
ಈ ವೇಳೆ ಭೀಮ್ ಆರ್ಮಿ ರಾಜ್ಯ ಯುವ ಘಟಕದ ಅಧ್ಯಕ್ಷ ಸಂತೋಷ ಪಾಳಾ, ಕರ್ನಾಟಕ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ದಿನೇಶ ದೊಡ್ಡಮನಿ, ಸಂತೋಷ ಮೇಲ್ಮನಿ, ಉದಯ್ ಸಾಗರ್, ಮಲ್ಲಿಕಾರ್ಜುನ್ ಮೂಡಬುಲಕರ್, ಭರತ್ ಧನ್ನಾ, ಸೂರ್ಯಕಾಂತ್ ರದ್ದೇವಾಡಿ, ಗುರುಪಾದ ದೊಡ್ಡಮನಿ, ದೇವೇಂದ್ರ ಸಿರನೂರ, ರಾಹುಲ್ ಉಪ್ಪಾರ, ಗುಂಡಪ್ಪ ಲಂಡನಕರ, ಸಿದ್ಧಾರ್ಥ ದಿಕ್ಸಂಗಿ, ಸತೀಶ್ ಮಾಲೆ, ಸೇರಿದಂತೆ ಹಲವರು ಹಾಜರಿದ್ದರು.







