ಕಲಬುರಗಿ | ಆರೆಸ್ಸೆಸ್ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಕಲಬುರಗಿ : ಆರೆಸ್ಸೆಸ್ ನೀತಿ ವಿರುದ್ಧ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆಯ ಅವರನ್ನು ಬೆಂಬಲಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿ ಬಳಿಕ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್, ಆರೆಸ್ಸೆಸ್ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ. ಆರೆಸ್ಸೆಸ್ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ. ಹಾಗಾಗಿ ಇಂತಹ ಸಂಘಟನೆಯನ್ನು ಮತ್ತೊಮ್ಮೆ ನಿಷೇಧಿಸಿದರೂ ದೇಶಕ್ಕೆ ಯಾವುದೇ ನಷ್ಟವಿಲ್ಲ ಎಂದು ಹೇಳಿದರು.
ಆರೆಸ್ಸೆಸ್ ಇದೊಂದು ನೋಂದಣಿ ಇಲ್ಲದ ಸಂಸ್ಥೆ, ಇದು ಸಂವಿಧಾನದ ಅಡಿ ನೋಂದಣಿ ಮಾಡಿಕೊಂಡಿಲ್ಲ. ಇದಕ್ಕೆ ಆದಾಯ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಇತ್ತೀಚೆಗೆ ಸಚಿವ ಪ್ರಿಯಾಂಕ ಖರ್ಗೆ ಅವರು ಆರೆಸ್ಸೆಸ್ ಅನ್ನು ಸರಕಾರಿ ಸ್ಥಳಗಳಲ್ಲಿ ನಿಷೇಧಿಸಬೇಕೆಂದು ಹೇಳಿರುವುದಕ್ಕೆ ಬೆಂಬಲವಿದೆ. ಖರ್ಗೆ ವಿರುದ್ಧ ಆರೆಸ್ಸೆಸ್ ಷಡ್ಯಂತ್ರ ನಡೆಸುತ್ತಿದೆ. ಇದನ್ನು ಸಮಿತಿ ಖಂಡಿಸುತ್ತದೆ. ಪ್ರಿಯಾಂಕ ಖರ್ಗೆ ಅವರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಮುಖಂಡರಾದ ಕೃಷ್ಣಪ್ಪ ಕರಣಿಕ್, ಪ್ರಕಾಶ್ ಮೂಲಭಾರತಿ, ರವಿ ಬಡಿಗೇರ, ತಿಪ್ಪಣ್ಣ ಕಣೇಕರ್, ಮಹಾಲಿಂಗ ಅಂಗಡಿ, ಬಿ.ಸಿ.ವಾಲಿ, ಎಸ್.ಪಿ. ಸುಳ್ಳದ್, ಶಿವಪುತ್ರರಾಗಿ, ಅಂಬಣ್ಣ ಜೀವಣಗಿ, ಎಸ್.ಶಂಕರ್, ಮಹಾದೇವ ತರನಳ್ಳಿ, ಸುಭಾಷ ಡಾಂಗೆ, ಶಿವಶರಣ ಮಾರಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







