Kalaburagi | ಲಲಿತಾ ಗೌತಮ್ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸಲು ದಲಿತ ಸೇನೆ ಆಗ್ರಹ

ಕಲಬುರಗಿ : ಉತ್ತರ ಪ್ರದೇಶದ ಮೀರತ್‌ನಲ್ಲಿ ಬಿ.ಎ. ಅಂತಿಮ ವರ್ಷದ ದಲಿತ ವಿದ್ಯಾರ್ಥಿನಿ ಲಲಿತಾ ಗೌತಮ್ ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಹಾಗೂ ಮೀರತ್ ಎಸ್‌ಎಸ್‌ಪಿ ಅವಿನಾಶ್ ಪಾಂಡೆ (ಐಪಿಎಸ್) ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸೇನೆ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಖಾಂತರ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಲಲಿತಾ ಗೌತಮ್ ಅವರು 2026ರ ಮೇ 15ರಂದು ಪರೀಕ್ಷೆಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದು, ಮೇ 17ರಂದು ಅವರ ಮೃತದೇಹ ಪತ್ತೆಯಾಗಿತ್ತು. ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯದೆ ಪ್ರಮುಖ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.
ಜುಲೈ 8ರಂದು ಮೀರತ್ ಕಲೆಕ್ಟರೇಟ್ ಎದುರು ನ್ಯಾಯಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆಯ ವೇಳೆ ಎಸ್‌ಎಸ್‌ಪಿ ಅವಿನಾಶ್ ಪಾಂಡೆ ಅವರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿ, ಪೊಲೀಸ್ ವಾಹನದೊಳಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅಡ್ವೊಕೇಟ್ ರವಿ ಗೌತಮ್ ಸೇರಿದಂತೆ 19ಕ್ಕೂ ಹೆಚ್ಚು ಹೋರಾಟಗಾರರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ದಲಿತ ಸೇನೆ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಅವಿನಾಶ್ ಪಾಂಡೆ ಅವರನ್ನು ಸೇವೆಯಿಂದ ವಜಾಗೊಳಿಸಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಅಡ್ವೊಕೇಟ್ ರವಿ ಗೌತಮ್ ಸೇರಿದಂತೆ ಬಂಧಿತರ ವಿರುದ್ಧದ ಎಲ್ಲ ಎಫ್‌ಐಆರ್‌ಗಳನ್ನು ರದ್ದುಪಡಿಸಿ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಲಲಿತಾ ಗೌತಮ್ ಹತ್ಯೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಿ, ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ತೀವ್ರ ಹೋರಾಟ ನಡೆಸುವುದಾಗಿ ದಲಿತ ಸೇನೆ ಕರ್ನಾಟಕ ಎಚ್ಚರಿಕೆ ನೀಡಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶಿವಲಿಂಗ ಮಾಡ್ಯಾಳಕರ, ಶಿವಲಿಂಗಪ್ಪ ದೊಡ್ಡಮನಿ, ಸುನೀಲ್ ಶಿಂಧೆ, ಕಪಿಲ ವಾಲಿ, ಶಿವಕುಮಾರ್ ಗೋಳಾ, ಪಂಚಶೀಲ ಚಾಂಬಾಳ, ಧರ್ಮರಾಜ ಕೋನಾ, ಚಂದ್ರಕಾಂತ ವೈಜಾಪುರ, ಗುರು ಮಾಳಗೆ, ಅರವಿಂದ ಕಮಲಾಪುರ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.






