Kalaburagi | ನೃತ್ಯ ಭಾರತೀಯ ಸಂಸ್ಕೃತಿ ಪರಿಚಯಿಸುವ ಮಹತ್ವದ ಕಲಾಮಾಧ್ಯಮ: ಡಾ. ಶಶಿಧರ ನರೇಂದ್ರ

ಕಲಬುರಗಿ: ನೃತ್ಯ ಕೇವಲ ಮನರಂಜನೆಯ ಕಲೆಯಲ್ಲ; ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಮಕ್ಕಳಿಗೆ ಪರಿಚಯಿಸುವ ಮಹತ್ವದ ಕಲಾಮಾಧ್ಯಮವಾಗಿದೆ ಎಂದು ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ ನರೇಂದ್ರ ಹೇಳಿದರು.
ನಗರದ ಮರಾಠಿ ಸಾಹಿತ್ಯ ಮಂಡಳದ ಆವರಣದಲ್ಲಿ ಸಂಸ್ಕಾರ ಭಾರತಿ ಕಲಬುರಗಿ ಹಾಗೂ ನೂಪುರ ಸಂಸ್ಕೃತಿ ನೃತ್ಯ ಮತ್ತು ಸಂಗೀತ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಗುರು ವಂದನಾ, ನಟರಾಜ ಪೂಜನ ಹಾಗೂ ಗೆಜ್ಜೆಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೃತ್ಯಾಭ್ಯಾಸದಿಂದ ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ, ಸಮಯಪ್ರಜ್ಞೆ, ಗುರು-ಹಿರಿಯರ ಗೌರವ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ಸಾಧ್ಯ. ನೃತ್ಯ ಕಲಿಯುವ ಮಕ್ಕಳು ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಜೀವನಮೌಲ್ಯಗಳನ್ನು ಅರಿತುಕೊಳ್ಳುವುದರ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ಕಲಾವಿದೆ ಹಾಗೂ ಶಾರದಾ ಸಂಗೀತ ಕೇಂದ್ರದ ಅಧ್ಯಕ್ಷೆ, ಸಂಗೀತ ಶಿಕ್ಷಕಿ ಸುನಂದಾ ಸಾಲವಾಡಗಿ ಮತ್ತು ತಬಲಾ ವಾದಕ ರಾಘವೇಂದ್ರ ಕುಲಕರ್ಣಿ ಅವರ ಶಿಷ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕಿ ಸುನಂದಾ ಕುಲಕರ್ಣಿ ಹಾಗೂ ಸಂಗೀತ ಶಿಕ್ಷಕಿ ಸುನಂದಾ ಸಾಲವಾಡಗಿ ಅವರನ್ನು ಗುರು ವಂದನಾ ನಿಮಿತ್ತ ಸನ್ಮಾನಿಸಲಾಯಿತು.
ನೂಪುರ ಸಂಸ್ಕೃತಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ಅಧ್ಯಕ್ಷೆ ವಿದುಷಿ ಸೌಖ್ಯಾ ಕುಲಕರ್ಣಿ ಹಾಗೂ ಪ್ರವೀಣ ಕುಲಕರ್ಣಿ ಅವರು ಗಣ್ಯರನ್ನು ಸನ್ಮಾನಿಸಿದರು. ನೃತ್ಯ ವಿದ್ಯಾರ್ಥಿಗಳ ಗೆಜ್ಜೆಪೂಜೆ, ನೃತ್ಯ ಪ್ರದರ್ಶನ, ಗುರುಗಳಿಗೆ ಗೌರವ ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮಗಳು ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದವು.
ಸಂಸ್ಕಾರ ಭಾರತಿ ಪ್ರಧಾನ ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ ಮಾತನಾಡಿ, ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅಗತ್ಯವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸರ್ವೋತ್ತಮ ಸತಾಳಕರ, ಪತ್ರಕರ್ತ ನಾರಾಯಣ ಜೋಶಿ, ದತ್ತಾತ್ರೇಯ ಸಬನವೀಸ್, ಸುನಂದಾ ಸಬನವೀಸ್, ವರಲಕ್ಷ್ಮಿ ಕುಲಕರ್ಣಿ, ಪಿಡ್ಡಪ್ಪಾ ಜಾಲಗಾರ, ಪ್ರವೀಣ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






