ಕಲಬುರಗಿ | ಅ.11ರಂದು ದಾಸ ಸಾಹಿತ್ಯ ಸಮ್ಮೇಳನ

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ವಲಯದ ವತಿಯಿಂದ ಹಿರಿಯ ಪತ್ರಕರ್ತ-ಸಾಹಿತಿ ಡಾ.ಶ್ರೀನಿವಾಸ ಸಿರನೂರಕರ್ ಅವರ ಸರ್ವಾಧ್ಯಕ್ಷತೆಯಲ್ಲಿ ಅ.11ರಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ಕಲಬುರಗಿ ವಿಭಾಗದ ಮೂರನೇ ದಾಸ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹಾಗೂ ಗೌರವಾಧ್ಯಕ್ಷರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಟಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ ನೇಮಕವಾಗಿದ್ದು, ಅವರನ್ನು ಸತ್ಕರಿಸಿ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಮಾಜಿ ಶಾಸಕರೂ ಆದ ಸ್ವಾಗತ ಸಮಿತಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದಾಸ ಸಾಹಿತ್ಯ ವಿಶೇಷ ಕೊಡುಗೆ ನೀಡಿದೆ. 12ನೇ ಶತಮಾನದ ವಚನ ಸಾಹಿತ್ಯದಂತೆ ದಾಸ ಸಾಹಿತ್ಯವೂ ಸಹ ಜನಮಾನಸದಲ್ಲಿ ದಟ್ಟವಾಗಿ ಹಾಸು ಹೊಕ್ಕಾಗಿದೆ. ಜೀವನ ಮೌಲ್ಯಗಳನ್ನು ಹೊಂದಿರುವ ದಾಸ ಸಾಹಿತ್ಯದ ಅರಿವನ್ನು ಇಂದಿನ ಹೊಸ ಪೀಳಿಗೆಗೆ ಮುಟ್ಟಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಪ್ರಚಾರಕ್ಕಾಗಿ ಹಗಲಿರುಳು ಶ್ರಮಿಸುತ್ತಿದೆ ಎಂದರು. ಸಮ್ಮೇಳನದ ಯಶಸ್ವಿಗೆ ಸಹಕರಿಸುವುದಾಗಿ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ದಾಸ ಸಾಹಿತ್ಯದಲ್ಲಿ ಅಡಗಿರುವ ಸಂದೇಶಗಳು ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶನ ನೀಡಲಿವೆ. ಇಂದಿನ ಬದುಕಿನ ಎಲ್ಲ ಸಮಸ್ಯೆಗಳಿಗೆ ದಾಸ ಸಾಹಿತ್ಯದಲ್ಲಿ ಪರಿಹಾರವಿವೆ ಎಂದ ಅವರು, ಪರಿಷತ್ತು ಜಿಲ್ಲೆಯಲ್ಲಿ ಅನೇಕ ಪ್ರಥಮ ಸಮ್ಮೇಳನಗಳಿಗೆ ಹೆಸರುವಾಸಿಯಾಗಿದೆ. ಅರ್ಥಪೂರ್ಣ ಸಮ್ಮೇಳನ ನಡೆಸಲು ಎಲ್ಲ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗೌರವಾಧ್ಯಕ್ಷ ಮಲ್ಲಣ್ಣ ಮಡಿವಾಳ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ರವಿಕುಮಾರ ಶಹಾಪುರಕರ್, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಶರಣರಾಜ ಛಪ್ಪರಬಂದಿ ಮಾತನಾಡಿದರು. ಪ್ರಮುಖರಾದ ಶಿವಾನಂದ ಸುರವಸೆ, ಮಂಜುನಾಥ ಕಂಬಾಳಿಮಠ, ಮಲ್ಲಿನಾಥ ಸಂಗಶೆಟ್ಟಿ, ಪ್ರಭವ ಪಟ್ಟಣಕರ್, ಸಂಗಣ್ಣ ಚೋರಗಸ್ತಿ, ಗಂಗಾಧರ, ಶಿವಕುಮಾರ ಸಿ.ಎಚ್., ಬಾಬುರಾವ ಪಾಟೀಲ, ಚಂದ್ರಕಾoತ ಸೂರನ್, ದಾನೇಶ ಕುಲಕರ್ಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







