Kalaburagi | ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮಕ್ಕೆ ದಸಂಸ ಆಗ್ರಹ
ಅ.2ರಂದು ಟಿ.ನರಸೀಪುರದಲ್ಲಿ ಸೌಹಾರ್ದ ಕಾರ್ಯಕ್ರಮ

ಕಲಬುರಗಿ: ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಚಾಲಕ ಡಿ.ಜಿ. ಸಾಗರ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರು ದಲಿತ ಸಂಘರ್ಷ ಸಮಿತಿ ಹಾಗೂ ದಲಿತ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದರು. ದಸಂಸದ ಇತಿಹಾಸ ಮತ್ತು ಹೋರಾಟದ ಹಿನ್ನೆಲೆಯನ್ನು ಅರಿತುಕೊಳ್ಳದೆ ಇಂತಹ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದು ಹೇಳಿದರು.
ದಸಂಸವು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ವಿಚಾರಧಾರೆಯ ಹಿನ್ನೆಲೆಯಲ್ಲಿ ರೂಪುಗೊಂಡ ಸಂಘಟನೆಯಾಗಿದ್ದು, ದಲಿತರು ಸೇರಿದಂತೆ ಶೋಷಿತ ಸಮುದಾಯಗಳಲ್ಲಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಜಾತಿ ವ್ಯವಸ್ಥೆ, ಅಸ್ಪೃಶ್ಯತೆ, ಮಹಿಳಾ ಶೋಷಣೆ ಹಾಗೂ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ರಾಜ್ಯಾದ್ಯಂತ ಹೋರಾಟಗಳನ್ನು ರೂಪಿಸಿದ್ದು, ಸಾಮಾಜಿಕ ಸಮಾನತೆ ಮತ್ತು ಸಂವಿಧಾನದ ಆಶಯಗಳ ರಕ್ಷಣೆಗೆ ದಸಂಸ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಡಿ.ಜಿ. ಸಾಗರ ತಿಳಿಸಿದರು.
ಇತ್ತೀಚೆಗೆ ಟಿ. ನರಸೀಪುರದಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಪ್ರತಾಪ್ ಸಿಂಹ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ ಎಂದು ಹೇಳಿದ ಅವರು, ಆ ಹೇಳಿಕೆಗಳು ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿವೆ ಎಂದು ಆರೋಪಿಸಿದರು.
ಸಾಮಾಜಿಕ ಸಾಮರಸ್ಯ ಮತ್ತು ಕೋಮು ಸೌಹಾರ್ದದ ಸಂದೇಶ ಸಾರುವ ಉದ್ದೇಶದಿಂದ ಅಕ್ಟೋಬರ್ 2ರಂದು ಟಿ. ನರಸೀಪುರದಲ್ಲಿ ಸೌಹಾರ್ದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಹಾದಿಮನಿ, ಎಚ್. ಶಂಕರ್, ಎಸ್.ಪಿ. ಸುಳ್ಳದ್, ಉಮೇಶ್ ನರೋಣಾ ಸೇರಿದಂತೆ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ಬಸವಣ್ಣ ವಿಚಾರಕ್ಕೆ ಕುತ್ತು ತರುವ ಯತ್ನ :
ಸೆಪ್ಟೆಂಬರ್ 27ರಂದು ಆಯೋಜಿಸಲಾಗಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶ ಕುರಿತು ಪ್ರತಿಕ್ರಿಯಿಸಿದ ಡಿ.ಜಿ. ಸಾಗರ, ಬಸವಣ್ಣನವರ ವಿಚಾರಧಾರೆಗೆ ಧಕ್ಕೆ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ವಿಶ್ವಕ್ಕೆ ಸಮಾನತೆ ಮತ್ತು ವಿಚಾರವಂತಿಕೆಯ ಸಂದೇಶ ನೀಡಿದ ಬಸವಣ್ಣನವರ ವಚನಗಳನ್ನು ವೈದಿಕ ಸಂಸ್ಕೃತಿಗೆ ಹೋಲಿಸಿ ತಪ್ಪಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಸಂಬಂಧ ಕನ್ಹೇರಿ ಸ್ವಾಮೀಜಿಯವರ ಭಾಷಣಕ್ಕೆ ನಿರ್ಬಂಧ ಹೇರಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.






