ಕಲಬುರಗಿ | ಪೌರ ಕಾರ್ಮಿಕರಿಗೆ ಮುಂಬಡ್ತಿ ಆದೇಶ ಪತ್ರ ವಿತರಿಸಿದ ಡಿಸಿ ಬಿ.ಫೌಝಿಯಾ ತರನ್ನುಮ್

ಕಲಬುರಗಿ : ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಸೇರಿದಂತೆ ಒಟ್ಟು 5 ಜನರಿಗೆ ಇತ್ತೀಚೆಗೆ ಜರುಗಿದ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ನಿಯಮ 42ರನ್ವಯ ಸ್ಥಾನಪನ್ನ ಮುಂಬಡ್ತಿಗೆ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಮುಂಬಡ್ತಿ ಹೊಂದಿದ ಸಿಬ್ಬಂದಿಗಳಿಗೆ ಆದೇಶ ಪತ್ರ ವಿತರಿಸಿದರು.
ಆಳಂದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಜಗದೇವಿ ಕರಬಸಪ್ಪ ಮತ್ತು ಮಂಗಳಾಬಾಯಿ ಹಣಮಂತ ತೋಳೆ ಇವರನ್ನು ಇದೇ ಕಚೇರಿಯಲ್ಲಿನ ನೈರ್ಮಲ್ಯ ಮೇಲ್ವಿಚಾರಕ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ. ಅದೇ ರೀತಿ ಜೇವರ್ಗಿ ಪುರಸಭೆ ಕಚೇರಿಯಲ್ಲಿ ಗ್ರೂಪ್ 'ಡಿ' ಲೋಡರ್ಸ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಂಕಪ್ಪ ಸಾಯಬಣ್ಣ ಮತ್ತು ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ದೇವೆಂದ್ರ ಜಾನಪ್ಪ ಅವರಿಗೆ ಜೇವರ್ಗಿ ಕಚೇರಿಯಲ್ಲಿನ ನೈರ್ಮಲ್ಯ ಮೇಲ್ವಿಚಾರಕ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ಇನ್ನು ಚಿತ್ತಾಪುರ ಪುರಸಭೆ ಕಚೇರಿಯಲ್ಲಿ ಕರ ವಸೂಲಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲಿಕಾರ್ಜುನ ಸಾಯಬಣ್ಣ ಇವರನ್ನು ಪ್ರಥಮ ದರ್ಜೆ ಕಂದಾಯ ನಿರೀಕ್ಷರಾಗಿ ಸ್ಥಾನಪನ್ನ ಮುಂಬಡ್ತಿ ನೀಡಿ ಜೇವರ್ಗಿ ಪುರಸಭೆ ಕಚೇರಿಗೆ ಸ್ಥಳ ನಿಯುಕ್ತಿ ಮಾಡಿ ಆದೇಶಿಸಲಾಗಿದೆ.





