Kalaburagi | ಜುಲೈ ಅಂತ್ಯಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸಿ ಗಡುವು

ಕಲಬುರಗಿ: ಚಿಂಚೋಳಿ ಪಟ್ಟಣದಲ್ಲಿ ಪುರಸಭೆಯಿಂದ ನಡೆಯುತ್ತಿರುವ 2025-26ನೇ ಸಾಲಿನ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಜುಲೈ ಅಂತ್ಯಕ್ಕೆ ಪೂರ್ಣಗೊಳಿಸುವಂತೆ ಮುಖ್ಯಾಧಿಕಾರಿಗಳಿಗೆ ಡಿಸಿ ಇಕ್ರಮ್ ಶರೀಫ್ ಗಡುವು ನೀಡಿದರು.
ಗುರುವಾರ ಚಿಂಚೋಳಿ ಪ್ರವಾಸ ಕೈಗೊಂಡಿದ್ದ ಅವರು, ಪಟ್ಟಣದ ಪ್ರಜಾ ಸೌಧದಲ್ಲಿ ಪುರಸಭೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದಕೊಳ್ಳಬೇಕು. ಕಾಮಗಾರಿ ನಿಧಾನಗತಿಯಿಂದ ಮುಂದುವರೆದಲ್ಲಿ ಸರ್ಕಾರಕ್ಕೆ ಅನಗತ್ಯ ಅರ್ಥಿಕ ಹೊರೆಯಾಗುತ್ತದೆ. ಇದನ್ನರಿತು ಅಧಿಕಾರಿಗಳು ಕಾಮಗಾರಿಗಳಿಗೆ ವೇಗ ಹೆಚ್ಚಿಸಬೇಕೆಂದ ಅವರು, ಪ್ರಸಕ್ತ 2026-27ನೇ ಸಾಲಿನ ಕಾಮಗಾರಿಗಳನ್ನು ಸಹ ಇದೇ ಆಗಸ್ಟ್ ದೊಳಗೆ ಮುಗಿಸುವಂತೆ ಸೂಚಿಸಿದರು.
ಇನ್ನೆನ್ನು ಮಳೆಗಾಲ ಆರಂಭವಾಗಲಿದ್ದು, ಸಮರ್ಥವಾಗಿಸಲು ಎದುರಿಸಲು ಪುರಸಭೆ ಸನ್ನಧರಾಗಬೇಕು. ಪಟ್ಟಣದಲ್ಲಿನ ಮಳೆ ನೀರು ಚರಂಡಿಗಳನ್ನು ಕೂಡಲೆ ಸ್ವಚ್ಚಗೊಳಿಸಬೇಕು. ಸಿಬ್ಬಂದಿಗಳು ವಾರ್ಡ್ ವಾರು ಹೋಗಿ ಜನರ ಸಮಸ್ಯೆ ಆಲಿಸಬೇಕು. ಮಳೆಗಾಲದಲ್ಲಿ ಕುಡಿಯುವ ನೀರಿಗೆ ಕಲುಷಿತ ನೀರು ಸೇರದಂತೆ ಎಚ್ಚರ ವಹಿಸಬೇಕು. ಇನ್ನು ಪಟ್ಟಣಕ್ಕೆ ನೀರು ಪೂರೈಸಲು ಪ್ರಸ್ತಾಪಿತ ಇನ್ನೊಂದು ಜಾಕ್ ವೆಲ್ ನಿರ್ಮಾಣಕ್ಕೆ ಪುರಸಭೆಗೆ ಉಚಿತ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು ಎಂದು ಡಿಸಿ ಇಕ್ರಮ್ ತಿಳಿಸಿದರು.
ಇನ್ನು ಇದೇ ಸಂದರ್ಭದಲ್ಲಿ ತಾಲೂಕಿನ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ಸಹ ನಡೆಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಕುಂದುಕೊರತೆ ಅರ್ಜಿಗಳಿಗೆ ಸ್ಪಂದಿಸಬೇಕು. ಜನರ ಕೆಲಸ ಕಾರ್ಯಗಳನ್ನು ಕಾಲಮಿತಿಯಲ್ಲಿ ಮಾಡಬೇಕು ಮತ್ತು ಅನಾವಶ್ಯಕ ಕಚೇರಿಗೆ ಅಲೆದಾಡಿಸಬಾರದು ಎಂದರಲ್ಲದೆ ಎ.ಜೆ.ಎಸ್.ಕೆ ಸೇರಿದಂತೆ ವಿವಿಧ ಸಾರ್ವಜನಿಕ ಸೇವೆ ನೀಡುವಲ್ಲಿ ಉತ್ತಮ ಪ್ರಗತಿ ಸಾಧಿಸಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಚಿಂಚೋಳಿ ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಇ.ಇ. ಸೋಮು ರಾಠೋಡ, ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ, ಕೆ.ಯು.ಡಿ.ಎಫ್.ಸಿ. ಅಧಿಕಾರಿಗಳು ಹಾಗೂ ಕಂದಾಯ, ಪುರಸಭೆ ಸಿಬ್ಬಂದಿ ವರ್ಗದವರು ಹಾಜರಿದ್ದರು.






