Kalaburagi | ರಾಜ್ಯ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಅದಿರಾ ಅಳ್ಳಿಗಿಡಗೆ ಡಿಸಿ ಇಕ್ರಮ್ ಶರೀಫ್ ಸನ್ಮಾನ

ಕಲಬುರಗಿ: ಬೆಂಗಳೂರಿನಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕಿಡ್ಸ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ 50 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದ ಕಲಬುರಗಿ ಖೇಲೊ ಇಂಡಿಯಾ ಸೆಂಟರ್‌ನ ಪ್ರತಿಭಾವಂತ ಕ್ರೀಡಾಪಟು ಅದಿರಾ ಅಳ್ಳಿಗಿಡ ಅವರನ್ನು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಸನ್ಮಾನಿಸಿ ಅಭಿನಂದಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಇಕ್ರಮ್ ಶರೀಫ್, ಅದಿರಾ ಅವರ ಸಾಧನೆ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತರುವಂತದ್ದು. ಇಂತಹ ಪ್ರತಿಭೆಗಳು ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಇನ್ನಷ್ಟು ಕೀರ್ತಿ ತಂದುಕೊಡಲಿ ಎಂದು ಶುಭ ಹಾರೈಸಿದರು.
ಅವರು ಮುಂದುವರೆದು, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಉತ್ತೇಜಿಸುವುದು ಆಡಳಿತದ ಪ್ರಮುಖ ಹೊಣೆಗಾರಿಕೆಯಾಗಿದ್ದು, ಯುವ ಕ್ರೀಡಾಪಟುಗಳಿಗೆ ಅಗತ್ಯ ಸೌಲಭ್ಯಗಳು ಮತ್ತು ತರಬೇತಿ ಅವಕಾಶಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡೂರು ಶ್ರೀನಿವಾಸಲು, ಪ್ರೊಬೇಷನರಿ ಐಎಎಸ್ ಅಧಿಕಾರಿ ಶಂಕರ್ ಮೊಗ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಿಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್, ಕೋಚ್ ಸಂತೋಷಕುಮಾರ ಬಾವಿಮನಿ, ಸಂಜಯ್ ಬಾಣದ, ಪ್ರವೀಣ್ ಪುಣೆ, ರಾಜು ಚೌಹಾಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






