Kalaburagi | ನೆಲದ ಮೇಲೆ ಕುಳಿತು ವಿಕಲಚೇತನ ಯುವತಿಯರ ಅಹವಾಲು ಆಲಿಸಿದ ಡಿಸಿ ಇಕ್ರಮ್ ಶರೀಫ್

ಕಲಬುರಗಿ : ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಬಂದ ವಿಕಲಚೇತನ ಯುವತಿಯರೊಂದಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾನವೀಯತೆ ಹಾಗೂ ಸರಳತೆ ಮೆರೆದ ಘಟನೆ ಶುಕ್ರವಾರ ಗಮನ ಸೆಳೆಯಿತು.
ತೀವ್ರ ದೈಹಿಕ ವಿಕಲತೆಯಿಂದ ಬಳಲುತ್ತಿರುವ ಶಕೀಲಾ, ಮಹೆಬೂಬ್ ಬೀ ಹಾಗೂ ನಸರೀನ್ ಅವರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಮೊದಲ ಮಹಡಿಯಲ್ಲಿರುವ ಕಚೇರಿಗೆ ಶಕೀಲಾ ತೆವಳಿಕೊಂಡೇ ಬಂದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, ತಮ್ಮ ಕಚೇರಿ ಹೊರಭಾಗದಲ್ಲೇ ಆಕೆಯ ಎದುರು ನೆಲದ ಮೇಲೆ ಕುಳಿತು ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಿದರು.
ಅಧಿಕಾರದ ಗಾಂಭೀರ್ಯವನ್ನು ಬದಿಗೊತ್ತಿ, ಸಾಮಾನ್ಯ ನಾಗರಿಕರಂತೆ ಸಮಾನವಾಗಿ ಕುಳಿತು ಮಾತನಾಡಿದ ಜಿಲ್ಲಾಧಿಕಾರಿಗಳ ನಡೆ ಅಲ್ಲಿದ್ದ ಸಾರ್ವಜನಿಕರ ಗಮನ ಸೆಳೆಯಿತು. ಯುವತಿಯರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಈ ಮಾನವೀಯ ನಡೆಗೆ ಸಾರ್ವಜನಿಕರು ಹಾಗೂ ಇತರ ವಿಕಲಚೇತನರು ಮೆಚ್ಚುಗೆ ವ್ಯಕ್ತಪಡಿಸಿದರು. “ಅಧಿಕಾರಿಯೊಬ್ಬರು ನಮ್ಮಂತಹವರೊಂದಿಗೆ ಇಷ್ಟು ಸರಳವಾಗಿ ಮತ್ತು ಗೌರವಯುತವಾಗಿ ನಡೆದುಕೊಳ್ಳುವುದು ಆಶಾಭಾವನೆ ಮೂಡಿಸಿದೆ” ಎಂದು ಯುವತಿಯರು ಸಂತಸ ವ್ಯಕ್ತಪಡಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಜನಸ್ನೇಹಿ ಆಡಳಿತದ ಅಗತ್ಯತೆಯನ್ನು ಈ ಘಟನೆ ಮತ್ತೊಮ್ಮೆ ಪ್ರತಿಬಿಂಬಿಸಿದ್ದು, ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರ ಮಾನವೀಯ ಸ್ಪಂದನೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.






