Kalaburagi | ಭೂ ಗ್ಯಾರಂಟಿ ಯೋಜನೆಯಡಿ ಇ-ಖಾತಾ ಪಡೆಯಲು ಡಿಸಿ ಇಕ್ರಮ್ ಶರೀಫ್ ಮನವಿ

ಕಲಬುರಗಿ : ರಾಜ್ಯ ಸರ್ಕಾರದ ‘ಭೂ ಗ್ಯಾರಂಟಿ’ ಯೋಜನೆಯಡಿ ಜಿಲ್ಲೆಯ ಎಲ್ಲಾ ಸ್ವತ್ತುಗಳಿಗೆ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಖಾತಾ ವಿತರಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತಾ ಪಡೆಯುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಕಲಬುರಗಿ ಮಹಾನಗರ ಪಾಲಿಕೆ, ಶಹಾಬಾದ್ ಮತ್ತು ಸೇಡಂ ನಗರಸಭೆಗಳು, ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ ಹಾಗೂ ವಾಡಿ ಪುರಸಭೆಗಳು ಮತ್ತು ಕಾಳಗಿ, ಕಮಲಾಪುರ ಹಾಗೂ ಯಡ್ರಾಮಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾರ್ಡ್‌ವಾರು ಆಸ್ತಿ ತೆರಿಗೆ ವಹಿಯಲ್ಲಿ ದಾಖಲಾಗಿರುವ ಸ್ವತ್ತುಗಳ ಕರಡು ಇ-ಖಾತಾಗಳನ್ನು ಪ್ರಕಟಿಸಲಾಗಿದೆ. ಈ ಕರಡು ಇ-ಖಾತಾಗಳನ್ನು ಅಂತಿಮಗೊಳಿಸುವುದರ ಜೊತೆಗೆ, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಸ್ವತ್ತುಗಳಿಗೂ ಡಿಸೆಂಬರ್ ಅಂತ್ಯದೊಳಗೆ ಇ-ಖಾತಾ ವಿತರಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ, ಖಾಲಿ ನಿವೇಶನ, ವಾಣಿಜ್ಯ, ಕೈಗಾರಿಕೆ ಹಾಗೂ ಇತರೆ ಸ್ವತ್ತುಗಳು ಸೇರಿ ಒಟ್ಟು 2,67,831 ಆಸ್ತಿಗಳಿವೆ. ಇವುಗಳಲ್ಲಿ 2,20,153 ಅಧಿಕೃತ ಹಾಗೂ 47,678 ಅನಧಿಕೃತ ಆಸ್ತಿಗಳಾಗಿವೆ. ಈ ಪೈಕಿ ಇದುವರೆಗೆ 91,314 ಆಸ್ತಿಗಳಿಗೆ ‘ಎ’ ಖಾತಾ ಹಾಗೂ 24,317 ಆಸ್ತಿಗಳಿಗೆ ‘ಬಿ’ ಖಾತಾ ಸೇರಿದಂತೆ ಒಟ್ಟು 1,15,631 ಆಸ್ತಿಗಳಿಗೆ ಇ-ಖಾತಾ ವಿತರಿಸಲಾಗಿದೆ.
ಇನ್ನೂ 1,28,839 ಸ್ವತ್ತುಗಳಿಗೆ ‘ಎ’ ಖಾತಾ ಹಾಗೂ 23,361 ಸ್ವತ್ತುಗಳಿಗೆ ‘ಬಿ’ ಖಾತಾ ನೀಡುವುದು ಬಾಕಿಯಿದೆ. ಬಾಕಿ ಉಳಿದಿರುವ ಸ್ವತ್ತುಗಳ ಮಾಲೀಕರು ಇ-ಖಾತಾ ಪಡೆಯುವ ಮೂಲಕ ಭೂ ಗ್ಯಾರಂಟಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.
ಸ್ಥಳೀಯ ಸಂಸ್ಥೆವಾರು ಬಾಕಿ ಇ-ಖಾತಾ ವಿವರ:
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪೈಕಿ ಶಹಾಬಾದ್‌ನಲ್ಲಿ 9,858, ಸೇಡಂನಲ್ಲಿ 5,626, ಅಫಜಲಪುರದಲ್ಲಿ 3,512, ಆಳಂದದಲ್ಲಿ 8,938, ಚಿಂಚೋಳಿಯಲ್ಲಿ 3,869, ಚಿತ್ತಾಪುರದಲ್ಲಿ 10,555, ಜೇವರ್ಗಿಯಲ್ಲಿ 4,798, ವಾಡಿಯಲ್ಲಿ 4,145, ಕಮಲಾಪುರದಲ್ಲಿ 5,005, ಕಾಳಗಿಯಲ್ಲಿ 1,835, ಯಡ್ರಾಮಿಯಲ್ಲಿ 2,598 ಹಾಗೂ ಕಲಬುರಗಿಯಲ್ಲಿ 91,461 ಆಸ್ತಿಗಳಿಗೆ ಇ-ಖಾತಾ ನೀಡುವುದು ಬಾಕಿಯಿದೆ.
ವಾರ್ಡ್‌ವಾರು ಅಭಿಯಾನ:
ಕಲಬುರಗಿ ಮಹಾನಗರ ಪಾಲಿಕೆ, ಶಹಾಬಾದ್ ಮತ್ತು ಸೇಡಂ ನಗರಸಭೆಗಳು, ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪುರ ಹಾಗೂ ವಾಡಿ ಪುರಸಭೆಗಳು ಮತ್ತು ಕಾಳಗಿ, ಕಮಲಾಪುರ ಹಾಗೂ ಯಡ್ರಾಮಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 2026ರ ಅಂತ್ಯದವರೆಗೆ ವಾರ್ಡ್‌ವಾರು ಅಭಿಯಾನ ನಡೆಯಲಿದೆ. ಸಾರ್ವಜನಿಕರು ಇ-ಆಸ್ತಿ ಆನ್‌ಲೈನ್ ತಂತ್ರಾಂಶದ ಮೂಲಕ ಅಥವಾ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಸೂಕ್ತ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಆಸ್ತಿಗಳಿಗೆ ಇ-ಖಾತಾ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮನವಿ ಮಾಡಿದ್ದಾರೆ.






