ಕಲಬುರಗಿ | ಡಿಸಿಸಿ ಬ್ಯಾಂಕ್ ಚುನಾವಣೆ : 9ರಲ್ಲಿ 6 ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ ಗೆಲುವು

ಕಲಬುರಗಿ: ಕುತೂಹಲ ಕೆರಳಿಸಿದ್ದ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ರವಿವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವನ್ನು ಸಾಧಿಸಿದ್ದಾರೆ.
ನಗರದ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ರವಿವಾರ ಒಟ್ಟು 13 ನಿರ್ದೇಶಕ ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ರವಿವಾರ ಮತದಾನ ನಡೆಯಿತು. ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಗೆಲುವಿನ ನಗೆ ಬೀರಿದರೆ, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ. ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲವು ಕಂಡಿದ್ದಾರೆ. ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದರು.
ನಿಗದಿಯಂತೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ತನಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಒಟ್ಟು 9 ಕ್ಷೇತ್ರಗಳಿಂದ ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದರು. ಇದರಿಂದ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಒಟ್ಟು 340 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಅದರಲ್ಲಿ ಎರಡು ಮತಗಳು ತಿರಸ್ಕೃತಗೊಂಡವು.
ಅಫಜಲಪುರ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಬಂದರವಾಡಾದ ಅಜಯ್ ಪಾಟೀಲ್ 11 ಮತಗಳ ಅಂತರದಿಂದ ರಾಜಕುಮಾರ ಜಿಡಗಿ ಅವರನ್ನು ಪರಾಭವಗೊಳಿಸಿದ್ದಾರೆ.
ಆಳಂದ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಖಜೂರಿಯ ಅಶೋಕ ಸಾವಳೇಶ್ವರ 5 ಮತಗಳ ಅಂತರದಿಂದ ಚಂದ್ರಶೇಖರ ಭೂಸನೂರ ಅವರನ್ನು ಸೋಲಿಸಿದ್ದಾರೆ.
ಚಿತ್ತಾಪುರ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಅಚ್ಚರಿಯ ಅಭ್ಯರ್ಥಿಯಾಗಿದ್ದ ಗುಂಡಗುರ್ತಿಯ ಸುನೀಲಕುಮಾರ್ ದೊಡ್ಡಮನಿ 18 ಮತಗಳ ಅಂತರದಿಂದ ಸಿದ್ದಪ್ಪಗೌಡ ಪಾಟೀಲ್ ಅವರನ್ನು ಮಣಿಸಿದ್ದಾರೆ.
ಜೇವರ್ಗಿಯ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಜೆಡಿಎಸ್‌ನ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರ ಸಹೋದರ, ನರಿಬೋಳದ ಬಸವರಾಜ ಪಾಟೀಲ್ ಐದು ಮತಗಳ ಅಂತರದಿಂದ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಸೋಲುಣಿಸಿದ್ದಾರೆ.
ಕಲಬುರಗಿ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಕುಮಸಿಯ ಕಲ್ಯಾಣರಾವ್ ಮೂಲಗೆ ನಾಲ್ಕು ಮತಗಳ ಅಂತರದಿಂದ ಶರಣಬಸಪ್ಪ ಪಾಟೀಲ್ ಅವರನ್ನು ಮಣಿಸಿದ್ದಾರೆ.
ಸೇಡಂ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ಕಾನಗಡ್ಡಾದ ಶಂಕರ ಭೂಪಾಲ್ ಚಂದ್ರಶೇಖರ ಎರಡು ಮತಗಳಿಂದ ನಾಗೇಂದ್ರಪ್ಪ ರಾಮಶೆಟ್ಟಿ ಅವರಿಗೆ ಸೋಲುಣಿಸಿದರು.
ಯಾದಗಿರಿ ಜಿಲ್ಲೆಯ ಸುರಪುರ ಪಿಕೆಪಿಎಸ್ ಸಹಕಾರ ಸಂಘಗಳ ಕ್ಷೇತ್ರದಿಂದ ವಿಠಲ ಯಾದವ್ 15 ಮತಗಳಿಂದ ಶಾಂತಗೌಡ ಅಲಿಯಾಸ್ ಶಾಂತರೆಡ್ಡಿ ಚೌದ್ರಿ ಅವರನ್ನು ಪರಾಭವಗೊಳಿಸಿದರು.
ಚಿಂಚೋಳಿಯ ಗೌತಮ ವೈಜನಾಥ ಪಾಟೀಲ್ ಒಂದು ಮತದ ಅಂತರದಿಂದ ಶೈಲೇಶಕುಮಾರ್ ಪ್ರಭುಲಿಂಗ ಅವರನ್ನು ಸೋಲಿಸಿದ್ದಾರೆ.
‘ಡಿ’ ವರ್ಗದ ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸುರೇಶ ಸಜ್ಜನ 75 ಮತಗಳ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಜ್ಯೋತಿ ಮರಗೋಳ ಅವರನ್ನು ಸೋಲಿಸಿದರು.







