ಕಲಬುರಗಿ | ನವೆಂಬರ್ ತಿಂಗಳದಾದ್ಯಂತ 'ಮಕ್ಕಳ ಮಾಸವಾಗಿ' ಆಚರಣೆಗೆ ನಿರ್ಧಾರ : ಮಂಜುಳಾ ಪಾಟೀಲ್

ಕಲಬುರಗಿ: ರಾಷ್ಟ್ರೀಯ ದತ್ತು ಮಾಸಾಚರಣೆ ಅಭಿಯಾನದ ಅಂಗವಾಗಿ ಮಕ್ಕಳ ಮೇಲಿನ ದೌರ್ಜನ್ಯ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಗರ್ಭಧಾರಣೆ, ಪೋಕ್ಸೋ ಪ್ರಕರಣಗಳು ಹೆಚ್ಚಲವಾಗುತ್ತಿರುವ ಹಿನ್ನೆಲೆ ಇದನ್ನು ತಡೆಗಟ್ಟಲು ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡಲು ನವೆಂಬರ್ ತಿಂಗಳನ್ನು “ಮಕ್ಕಳ ಮಾಸವಾಗಿ" ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಮಂಜುಳಾ ಪಾಟೀಲ್ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ. ತಿಪ್ಪೇಸ್ವಾಮಿ ಅವರ ಸಲಹೆ ಮತ್ತು ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸೂಚನೆಯಂತೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದದೊಂದಿಗೆ ಇಡೀ ನವೆಂಬರ್ ತಿಂಗಳು ಕಲಬುರಗಿ ಜಿಲ್ಲೆಯಾದ್ಯಂತ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕ್ರಿಯಾ ಯೋಜನೆ ರೂಪಿಸಿಕೊಂಡು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಭಾಗವಾಗಿ ಮಕ್ಕಳ ಹಕ್ಕುಗಳ ಗ್ರಾಮ ಸಭೆಗಳು, ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಅಭಿಯಾನ, ಬಾಲಕಾರ್ಮಿಕರು ಹಾಗೂ ಶಾಲೆ ಬಿಟ್ಟ ಮಕ್ಕಳ ಗುರುತಿಸುವಿಕೆ ಮತ್ತು ರಕ್ಷಣೆ, ಮಕ್ಕಳ ರಕ್ಷಣಾ ಬಲವರ್ಧನೆ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016, ತೆರೆದ ಮನೆ ಕಾರ್ಯಕ್ರಮದ ಅನುಷ್ಠಾನ, ಅನಾಥ ಹಾಗೂ ಸಂಕಷ್ಟದಲ್ಲಿನ ಮಕ್ಕಳ ಗುರುತಿಸುವಿಕೆ, ಮಕ್ಕಳ ಸಹಾಯವಾಣಿ ಹಾಗೂ ದತ್ತು ಕಾರ್ಯಕ್ರಮದ ಪ್ರಚಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈಗಾಗಲೇ ಕೆಲ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಜುಳಾ ರೆಡ್ಡಿ, ಈಶ್ವರ್, ಆನಂದ, ಬಸವರಾಜ್ ತೆಂಗಳಿ, ಭರತೇಶ, ಆನಂದ, ಬಸವರಾಜ್ ಕರಡ್ಕಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







