ಕಲಬುರಗಿ | ಕಲ್ಯಾಣ ಕರ್ನಾಟಕದಲ್ಲಿ ರಂಗ ಚಟುವಟಿಕೆ ಕುಂಠಿತ: ಶಶೀಲ್ ನಮೋಶಿ ಕಳವಳ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಇತ್ತೀಚೆಗೆ ರಂಗಭೂಮಿ ಚಟುವಟಿಕೆಗಳು ಕುಂಠಿತಗೊoಡಿವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಶಶೀಲ್ ಜಿ ನಮೋಶಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಸ್ಕಾರ ಭಾರತಿ ಸಂಯುಕ್ತಾಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ರವಿವಾರ ಏರ್ಪಡಿಸಿದ ನನ್ನ ಪಿತಾಮಹ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿರು.
ಬೇರೆ ಭಾಗದಲ್ಲಿನ ನಾಟಕಗಳಿಗೆ ಹೋಲಿಕೆ ಮಾಡಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಷಿಣಿಸಿವೆ. ಇದಕ್ಕೆ ನಾಟಕ ಕಲಾವಿದರು ಹಾಗೂ ಆಸಕ್ತರ ಕೊರತೆ ಎದ್ದು ಕಾಣುತ್ತಿದೆ. ಈ ದಿಸೆಯಲ್ಲಿ ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿಗಳನ್ನು ಚುರುಕುಗೊಳಿಸಬೇಕಾಗಿದೆ ಎಂದು ಹೇಳಿದರು.
ಚಲನಚಿತ್ರ ನಟ ಹಗೂ ನಿರ್ದೇಶಕ ಸುಚೇಂದ್ರ ಪ್ರಸಾದ ಮಾತನಾಡಿ, ಸಾಂಸ್ಕೃತಿಕ ಜೀವನ ರೂಪಿಸುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಹೀಗಾಗಿ "ನನ್ನ ಪಿತಾಮಹ" ಎಂಬ ನಾಟಕ ಉತ್ತರ ಕರ್ನಾಟಕ ಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ. ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಮತ್ತೆ ಬೇರೂರಲು ರಂಗ ನಾಟಕಗಳು ಪ್ರಮುಖ ಪಾತ್ರ ನಿರ್ವಹಿಸುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ನಟನೆಗೆ ಭಾವನೆಗಳ ಬೆಸುಗೆ ಮುಖ್ಯ. ನಾಟಕ ಕಲಾವಿದರು ಅನೇಕ ಸಮಸ್ಯೆಗಳನ್ನು ಎದುರಿಸಿ ರಂಗಭೂಮಿ ಶ್ರೀಮಂತಿಕೆಗೆ ಶ್ರಮಿಸಿದ್ದಾರೆ. ನಾಟಕಗಳನ್ನು ನೋಡುವ ಪ್ರೇಕ್ಷಕರು ಹೆಚ್ಚಾಗಬೇಕು. ಈ ಮೂಲಕ ಕಲಾ ಸಿರಿಯನ್ನು ಹೆಚ್ಚಿಸಿ ಪೋಷಿಸಬೇಕು ಎಂದರು.
ಯಜ್ಞ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಾಲಾ ದಣ್ಣೂರ, ಸಂಸ್ಕಾರ ಭಾರತಿ ಅಧ್ಯಕ್ಷೆ ಲೀಲಾವತಿ ಕುಲಕರ್ಣಿ, ಕಾರ್ಯದರ್ಶಿ ಡಾ. ಅಂಬುಜಾ ಮಳಖೇಡಕರ್, ಡಾ., ಸ್ವಪ್ನಿಕ್ ಚಾಪೇಕರ್, ಜಿಲ್ಲಾ ಕಸಾಪ ದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಭುವನೇಶ್ವರಿ ಹಳ್ಳಿಖೇಡ, ಸಿದ್ಧಲಿಂಗ ಬಾಳಿ, ದಿನೇಶ ಮದಕರಿ, ಶಿವಾನಂದ ಸುರವಸೆ, ರಾಜೇಂದ್ರ ಮಾಡಬೂಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







