Kalaburagi | ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗದಿದ್ದರೆ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ : ಚಿಂತನ ಸಭೆಯಲ್ಲಿ ಒತ್ತಾಯ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪ್ರತ್ಯೇಕ ಕಲ್ಯಾಣ ಕರ್ನಾಟಕ ರಾಜ್ಯಕ್ಕಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕು ಎಂದು ವಿವಿಧ ಮುಖಂಡರು, ಹೋರಾಟಗಾರರು, ಚಿಂತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದರು.
ಮಾಜಿ ಸಚಿವ ಹಾಗೂ ಹೋರಾಟಗಾರ ದಿ. ವೈಜನಾಥ ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ 371(ಜೆ) ಪೂರ್ಣಾನುಷ್ಠಾನ ಕುರಿತ ಚಿಂತನ ಸಭೆಯಲ್ಲಿ ಮಾತನಾಡಿದ ಹಲವು ಗಣ್ಯರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಕಲ್ಯಾಣ ಕರ್ನಾಟಕಕ್ಕೆ ಬರಬೇಕಾದ ಅನುದಾನ ಸಮರ್ಪಕವಾಗಿ ದೊರೆಯುತ್ತಿಲ್ಲ. ಈ ಭಾಗಕ್ಕೆ ವಿಶೇಷ ಕೈಗಾರಿಕಾ ನೀತಿ ರೂಪಿಸುವ ಅಗತ್ಯವಿದ್ದು, ಸೆಮಿಕಂಡಕ್ಟರ್ ಘಟಕದಂತಹ ದೊಡ್ಡ ಕೈಗಾರಿಕೆಗಳನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕಾಗಿತ್ತು. 371(ಜೆ) ಜಾರಿಯಾದ ಬಳಿಕ ವೈದ್ಯಕೀಯ ಶಿಕ್ಷಣದಲ್ಲಿ ಅವಕಾಶಗಳು ಹೆಚ್ಚಾಗಿರುವುದು ಸಕಾರಾತ್ಮಕ ಬೆಳವಣಿಗೆಯಾದರೂ, ಸಮಗ್ರ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಕ್ರಮಗಳು ಅಗತ್ಯವಿವೆ ಎಂದು ಹೇಳಿದರು.
ಉದ್ಯಮಿ ಜಗನ್ನಾಥ ಶೆಗಜಿ ಮಾತನಾಡಿ, ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಹೋರಾಟಗಾರ ದಿ. ವೈಜನಾಥ ಪಾಟೀಲ್ ಅವರ ಸೇವೆಯನ್ನು ಸ್ಮರಿಸಿ ಏಳು ಜಿಲ್ಲೆಗಳಲ್ಲೂ ಅವರ ಪ್ರತಿಮೆ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ ಅನಿಲ್ ಬೆಳ್ದಾಳೆ ಮಾತನಾಡಿ, ಹಲವು ಹೋರಾಟಗಳ ಫಲವಾಗಿ ಅನುದಾನ ದೊರೆಯುತ್ತಿದ್ದರೂ ನಿರೀಕ್ಷಿತ ಅಭಿವೃದ್ಧಿ ಕಂಡುಬಂದಿಲ್ಲ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅರ್ಥಶಾಸ್ತ್ರಜ್ಞ ಬಸವರಾಜ ಕುಮನೂರ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಶಿಶು ಮರಣ ಪ್ರಮಾಣ, ರಕ್ತಹೀನತೆ ಮತ್ತು ಬಡತನದಂತಹ ಸಮಸ್ಯೆಗಳು ಇನ್ನೂ ಗಂಭೀರವಾಗಿವೆ. ನೀರಾವರಿ ಯೋಜನೆಗಳನ್ನು ವೇಗಗೊಳಿಸಿ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಒತ್ತಾಯಿಸಿದರು.
ಯುವ ಹೋರಾಟಗಾರ ಸಾಯಿಬಣ್ಣ ಜಮಾದಾರ್ ಮಾತನಾಡಿ, ಖಾಸಗಿ ಕಂಪನಿಗಳಲ್ಲಿ ಕಲ್ಯಾಣ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಬೇಕು ಹಾಗೂ 371(ಜೆ) ಅನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಷ್ಟಗಿ ಮಾತನಾಡಿ, 371(ಜೆ) ಜಾರಿಯಾದ ಬಳಿಕವೂ ಪ್ರದೇಶದ ಅಭಿವೃದ್ಧಿಗೆ ಅಗತ್ಯ ವೇಗ ಸಿಕ್ಕಿಲ್ಲ. ನೀರಾವರಿ, ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಚಂದ್ರಶೇಖರ್ ಆವಂಟಿ, ನಿವೃತ್ತ ಪ್ರಾಧ್ಯಾಪಕ ವಾಸುದೇವ ಸೇಡಂ, ಶರಣಪ್ಪ ಜಡಿ, ನಬಿಸಾಬ್ ಕುಷ್ಟಗಿ, ಮಹೇಶ್ ರೆಡ್ಡಿ ಸೇರಿದಂತೆ ಹಲವರು ಭಾಗವಹಿಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸಮಗ್ರ ಕಾರ್ಯಯೋಜನೆ ರೂಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲೇಖಕ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಹರಸೂರ, ಗೌತಮ್ ವೈಜನಾಥ ಪಾಟೀಲ್, ಬಸವರಾಜ ಇಂಗಿನ, ಬಸವರಾಜ ಗಿಣಗೆರ, ಕುಪೇಂದ್ರ ಪಾಟೀಲ್, ರಾಜೇಂದ್ರ ಕರಿಕಲ್, ಮಲ್ಲಿನಾಥ ಕಾಳಗಿ, ಓಂಪ್ರಕಾಶ್ ಹೆಬ್ಬಾಳ, ಸದ್ದಾಂ ವಜೀರಗಾಂವ್, ರವಿರಾಜ್ ಕೊರವಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು. ದೇವೇಂದ್ರಪ್ಪ ಅವಂಟಿ ನಿರೂಪಿಸಿದರು. ಚಿಂತನ ಸಭೆ ಮುಗಿದ ಬಳಿಕ ವೈಜನಾಥ ಪಾಟೀಲ್ ಅವರ ಪುತ್ರ ಗೌತಮ್ ಪಾಟೀಲ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಹೋರಾಟಕ್ಕೆ ಚಾಲನೆ ನೀಡಲಾಯಿತು.






