ಕಲಬುರಗಿ | ಬೇಡ-ನಾಯಕ ಸಮುದಾಯವನ್ನು ನಿಂದಿಸಿದ ರಮೇಶ್ ಕತ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

ಕಲಬುರಗಿ: ಬೇಡ-ನಾಯಕ ಸಮುದಾಯವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ರಮೇಶ್ ಕತ್ತಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದಿಂದ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ದಿಢೀರನೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಉಪ ಮಹಾಪೌರರು ಹಾಗೂ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ಕಲಬುರಗಿ ವಿಭಾಗೀಯ ಅಧ್ಯಕ್ಷರಾದ ನಂದಕುಮಾರ ಮಾಲಿ ಪಾಟೀಲರ ನೇತೃತ್ವದಲ್ಲಿ ಸಮಾಜದ ಜನ ಜಮಾಯಿಸಿ ರಮೇಶ ಕತ್ತಿ ಪ್ರತಿಕೃತಿ ದಹಿಸಿ ಅವರ ಭಾವಚಿತ್ರವನ್ನು ಕತ್ತೆಗೆ ತೂಗುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿಯ ಬಿಕೆ ಮಾಡೆಲ್ ಶಾಲೆ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುವ ವೇಳೆ ರಮೇಶ್ ಕತ್ತಿ ಅವರು ನಾಯಕ ಸಮಾಜದ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕೂಡಲೇ ಕತ್ತಿ ವಿರುದ್ಧ ದೂರು ದಾಖಲಿಸಿ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಶರಣು ಬಿ.ಸುಬೇದಾರ್, ಪ್ರಮುಖರಾದ ಮಾರುತಿ ಜಮಾದಾರ್, ವೆಂಕಟೇಶ ಕವಲ್ದಾರ್, ಹೋರಾಟಗಾರರಾದ ಶ್ರವಣಕುಮಾರ ಡಿ.ನಾಯಕ, ನ್ಯಾಯವಾದಿಗಳು ಹಾಗು ಮಾನವ ಬಂಧುತ್ವ ವೇದಿಕೆಯ ನಾಗೇಂದ್ರ ಜವಳಿ, ವಾಲ್ಮೀಕಿ ಸಮಾಜದ ಜೇವರ್ಗಿ ತಾಲೂಕಾ ಅಧ್ಯಕ್ಷ ಸುರೇಶ ಗೂಡುರು, ವಿಶ್ವ ಮದಕರಿ, ದೇವು ಲಖನಾಪುರ, ವಾಲ್ಮೀಕಿ ಸಮಾಜದ ಹಾಗು ದಲಿತ ಪರ ಸಂಘಟನೆಯ ನಗರ ಮತ್ತು ವಿವಿಧ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಸಮಸ್ತ ಸಮುದಾಯದ ಬಂಧುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







