ಕಲಬುರಗಿ | ಶಿವಕುಮಾರ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹ

ಕಲಬುರಗಿ: ಅಫಜಲಪುರ ತಾಲೂಕಿನ ಹಾವನೂರ ಗ್ರಾಮದ ಶಿವಕುಮಾರ ಸಿದ್ದಪ್ಪ ಹೊಸಮನಿ ಹತ್ಯೆ ಪ್ರಕರಣದಲ್ಲಿ ಇನ್ನೂ ಆರೋಪಿಗಳಾಗಿ ಹೆಸರಿಸಲಾಗಿರುವ ಏಕನಾಥ ಅಂಬಾದಾಸ ಧುರ್ವೆ ಹಾಗೂ ಅಖಿಲೇಶ ಅವರನ್ನು ಕೂಡಲೇ ಬಂಧಿಸಿ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬೇಕು ಎಂದು ಮೃತ ಶಿವಕುಮಾರ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಮೃತನ ಸಹೋದರ ಅಶೋಕ ಹೊಸಮನಿ, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವುದಕ್ಕಾಗಿ ಧನ್ಯವಾದ ಸಲ್ಲಿಸಿದ ಅವರು, ಪ್ರಕರಣದಲ್ಲಿ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆ ಇದೆ. ಹತ್ಯೆಗೆ ಪ್ರಚೋದನೆ ನೀಡಿದವರು ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಹತ್ಯೆಯ ದಿನವೇ ಆರೋಪಿಗಳು ತಾವು ಶಿವಕುಮಾರನನ್ನು ಕೊಲೆ ಮಾಡಿರುವುದಾಗಿ ಕೆಲ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರೂ, ಎರಡು ದಿನಗಳ ಬಳಿಕ ಕಾಣೆಯಾಗಿರುವ ಕುರಿತು ಕುಟುಂಬದಿಂದ ದೂರು ಸ್ವೀಕರಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.
ಕೊಲೆ ನಡೆದಿರುವ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ಇದ್ದರೂ, ನಾಪತ್ತೆ ಪ್ರಕರಣ ದಾಖಲಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಕರಣದ ನಿಜಾಂಶವನ್ನು ಮುಚ್ಚಿಹಾಕಲು ಕೆಲ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರಯತ್ನಿಸಿದ್ದಾರೆ ಎಂಬ ಅನುಮಾನ ನಮಗಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮೃತ ಶಿವಕುಮಾರ ಅವರ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಕೃಷಿ ಹಾಗೂ ಕೂಲಿ ಕೆಲಸವನ್ನೇ ಅವಲಂಬಿಸಿದೆ. ಹೀಗಾಗಿ ನೊಂದ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ಕೃಷಿ ಮಾಡಲು ಜಮೀನು ಹಾಗೂ ನೀರಾವರಿ ಸೌಲಭ್ಯ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
“ನಮ್ಮ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ಕಾನೂನಿನ ಮುಂದೆ ತರಬೇಕು. ಪ್ರಕರಣದ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಿ ನಮಗೆ ನ್ಯಾಯ ಒದಗಿಸಬೇಕು” ಎಂದು ಅಶೋಕ ಹೊಸಮನಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗಪ್ಪ ಹೊಸಮನಿ, ಕರಣಮ್ಮ ಹೊಸಮನಿ ಹಾಗೂ ಪಾರ್ವತಿ ಶಿವಕುಮಾರ ಹೊಸಮನಿ ಉಪಸ್ಥಿತರಿದ್ದರು.






