ಕಲಬುರಗಿ | ಹಳೆ ಶಹಾಬಾದ್‌ನಲ್ಲಿ ಪ್ರಜಾ ಸೌಧ, ಕ್ರೀಡಾಂಗಣ ನಿರ್ಮಾಣಕ್ಕೆ ಆಗ್ರಹ

ಕಲಬುರಗಿ: ಶಹಾಬಾದ್ ಪಟ್ಟಣದ ಮೂಲ ಪ್ರದೇಶವಾಗಿರುವ ಹಳೆ ಶಹಾಬಾದಿನಲ್ಲಿ ಪ್ರಜಾ ಸೌಧ ಮತ್ತು ಕ್ರೀಡಾಂಗಣ ನಿರ್ಮಿಸಲು ಹಳೆ ಶಹಾಬಾದ್ ನಾಗರಿಕ ಹೋರಾಟ ಸಮಿತಿ ಒತ್ತಾಯಿಸಿದೆ.
ಶನಿವಾರ ಹಳೆ ಶಹಾಬಾದ್ ಹಾಗೂ ತರನಳ್ಳಿ ಗ್ರಾಮದ ಗ್ರಾಮಸ್ಥರು ಪಾದಯಾತ್ರೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಬಸವರಾಜ ಮತ್ತಿಮಡು ಹಾಗೂ ಜಿಲ್ಲಾಧಿಕಾರಿ ಬಿ. ಫೌಝಿಯಾ ತರನ್ನುಮ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಮಿತಿಯ ಪದಾಧಿಕಾರಿಗಳು, ಪ್ರಜಾ ಸೌಧ ನಿರ್ಮಾಣಕ್ಕಾಗಿ ಈಗಾಗಲೇ ಸರ್ವೇ ನಂ.15 ಮತ್ತು 16ರಲ್ಲಿ ಭೂಮಿ ಗುರುತಿಸಲಾಗಿದೆ. ಆದರೆ, ಕೆಲವು ಸಂಘಟನೆಗಳ ಆಕ್ಷೇಪಣೆಯಿಂದ ಸರ್ವೇ ನಂ.184ರಲ್ಲಿ ಭೂಮಿ ಗುರುತಿಸಲು ಪ್ರಯತ್ನ ನಡೆಯುತ್ತಿದೆ. ಆ ಜಮೀನು ವಿವಾದಾತ್ಮಕವಾಗಿದ್ದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ. ಅಲ್ಲಿ ಕಟ್ಟಡ ನಿರ್ಮಿಸಿದರೆ ಅದು ನೆನೆಗುದ್ದಿಗೆ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದರು.
ಶಹಾಬಾದ್ ಪಟ್ಟಣ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಮೂಲ ಶಹಾಬಾದ್ (ಹಳೆ ಶಹಾಬಾದ್) ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಪಟ್ಟಣದಿಂದ ಕೇವಲ 3 ಕಿ.ಮೀ ದೂರದಲ್ಲಿದ್ದರೂ ಬಸ್ ಸಂಪರ್ಕವಿಲ್ಲ. ಸರ್ಕಾರಿ ಕಚೇರಿ, ಶಾಲೆ-ಕಾಲೇಜುಗಳು ಎಲ್ಲವೂ ಶಹಾಬಾದ್ ಪಟ್ಟಣದಲ್ಲೇ ಕೇಂದ್ರೀಕೃತವಾಗಿವೆ ಎಂದು ಅವರು ವಿಷಾದಿಸಿದರು.
ನೂತನ ತಾಲೂಕು ಆಡಳಿತ ಕಚೇರಿಯಾದ ಪ್ರಜಾ ಸೌಧ ಮತ್ತು ಕ್ರೀಡಾಂಗಣವನ್ನು ಸರ್ವೇ ನಂ.15 ಮತ್ತು 16ರಲ್ಲೇ ನಿರ್ಮಿಸಿದರೆ, ಅದು ರಾಜ್ಯ ಹೆದ್ದಾರಿ 149 ಮತ್ತು ವರ್ತುಲ ರಸ್ತೆ ಸಂಪರ್ಕದಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ಅನುಕೂಲವಾಗಲಿದೆ ಎಂದು ಸಮಿತಿಯವರು ಒತ್ತಾಯಿಸಿದರು.
ಪಾದಯಾತ್ರೆ ಮತ್ತು ಮನವಿ ಕಾರ್ಯಕ್ರಮದಲ್ಲಿ ವಾಜೀದ್ ಖಾನ್ ಜಮಾದಾರ, ಬಸವರಾಜ ತರನಳ್ಳಿ, ಶಿವಕುಮಾರ ನಾಟೀಕರ್, ಬಸವಣಪ್ಪ ವಾಲಿ, ಸ್ಬೇಹಲ್ ಜಾಯಿ, ಸಾಜಿದ್ ಗುತ್ತೇದಾರ, ರಮೇಶ ಪವಾರ, ಶರಣಗೌಡ ಪಾಟೀಲ, ಭಾನು ಪ್ರತಾಪ ಪವಾರ, ಮೀರ್ ಅಲಿ ತರನಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.







