Kalaburagi | ನಿಂಬರ್ಗಾ, ಆಳಂದದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದ ನಿಂಬರ್ಗಾ ಮತ್ತು ಆಳಂದ ಭಾಗದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಎರಡೂ ಕಡೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳನ್ನು ಮಂಜೂರು ಮಾಡಬೇಕು ಎಂದು ಕಮಲಾಬಾಯಿ ಕುಡಕಿ ಆಗ್ರಹಿಸಿದ್ದಾರೆ.
ಈ ಕುರಿತು ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನಿಂಬರ್ಗಾ ಮತ್ತು ಆಳಂದ ಭಾಗದ ಗ್ರಾಮೀಣ ವಿದ್ಯಾರ್ಥಿನಿಯರು ಪದವಿಪೂರ್ವ ಶಿಕ್ಷಣದ ಬಳಿಕ ಉನ್ನತ ಶಿಕ್ಷಣಕ್ಕಾಗಿ ಕಲಬುರಗಿ ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಆರ್ಥಿಕ ಸಂಕಷ್ಟ, ಸಾರಿಗೆ ಹಾಗೂ ವಸತಿ ಸೌಲಭ್ಯಗಳ ಕೊರತೆ ಮತ್ತು ಸುರಕ್ಷತೆಯ ಆತಂಕದಿಂದಾಗಿ ಅನೇಕ ಬಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಂಜುಂಡಪ್ಪ ವರದಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಭಾಗಗಳ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು. ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುವುದರಿಂದ ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಪರಿವರ್ತನೆ ಸಾಧ್ಯವಾಗಲಿದೆ. ಹೆಣ್ಣುಮಕ್ಕಳಿಗೆ ಮನೆ ಸಮೀಪದಲ್ಲೇ ಉನ್ನತ ಶಿಕ್ಷಣ ದೊರೆಯುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಒತ್ತಿಹೇಳಿದ್ದಾರೆ.
ಆಳಂದ ತಾಲೂಕಿನಲ್ಲಿ ಪ್ರತ್ಯೇಕ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪಿಸುವುದರ ಜತೆಗೆ ನಿಂಬರ್ಗಾದಲ್ಲಿಯೂ ಕಾಲೇಜು ಮಂಜೂರು ಮಾಡಬೇಕು. ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ಉದ್ಯೋಗಾವಕಾಶಗಳಿಗೆ ಪೂರಕವಾದ ಕೋರ್ಸ್‌ಗಳನ್ನು ಆರಂಭಿಸಬೇಕು. ಬಡ ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಸಾರಿಗೆ ಸೌಲಭ್ಯ ಒದಗಿಸಬೇಕು. ಅಗತ್ಯ ಉಪನ್ಯಾಸಕರು, ಗ್ರಂಥಾಲಯ, ಪ್ರಯೋಗಾಲಯ ಮತ್ತು ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ದತ್ತಾತ್ರೇಯ ಕುಡಕಿ, ಸಂಜೀವಕುಮಾರ ಕಾಂಬಳೆ, ಅವಿನಾಶ ಮೇಲಿನಕೇರಿ ಬೆಣ್ಣಿಶಿರೂರ, ಮಲ್ಲಪ್ಪ ದೊಡ್ಡಿ ಹಾಗೂ ಮಲ್ಲಿಕಾರ್ಜುನ ಖನ್ನಾ ಉಪಸ್ಥಿತರಿದ್ದರು.






