ಕಲಬುರಗಿ| ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಕೆಗೆ ವಿ.ಜಿ ದೇಸಾಯಿ ಆಗ್ರಹ

ಕಲಬುರಗಿ: ಆಶಾ ಕಾರ್ಯಕರ್ತೆಯಾರಿಗೆ ಮಾಸಿಕ 15000 ರೂ. ಗೌರವಧನ ನೀಡಬೇಕು ಹಾಗೂ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವಿಭಾಗೀಯ ಸಂಚಾಲಕರಾದ ವಿ.ಜಿ ದೇಸಾಯಿ ಆಗ್ರಹಿಸಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024-25ನೇ ಸಾಲಿನ ಮಾಸಿಕ 1,500ರಂತೆ ಒಂದು ವರ್ಷದ ಬಾಕಿ ಇರುವ ಪ್ರೋತ್ಸಾಹಧನವನ್ನು ತಕ್ಷಣವೇ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷರಾದ ಶಿವಲಿಂಗಮ್ಮ ನಂದೂರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಿವೃತ್ತಿಯಾಗಿರುವ ಆಶಾ ಕಾರ್ಯಕರ್ತೆಯರಿಗೆ ನಿಯಮಾನುಸಾರ ಬಾಕಿ ಇರುವ ಇಡಿಗಂಟನ್ನು ನೀಡಬೇಕು, ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳದ ರಾಜ್ಯದಲ್ಲಿರುವಂತೆ 5 ಲಕ್ಷಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿಯಾದ ಗೀತಾ ಬಡಗೇರ ಮಾತನಾಡಿ, ಸಮಸ್ತ ಆ್ಯಪ್ ಮೂಲಕ ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರ್ವಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು, ಮೊಬೈಲ್ ಕೆಲಸಗಳಿಗೆ ಮೊಬೈಲ್ ನೀಡಬೇಕು, ಪ್ರೋತ್ಸಾಹಧನ ನಿಗದಿ ಮಾಡಬೇಕು, ಯಾರಿಗೆ ಮೊಬೈಲ್ ಕೆಲಸ ಮಾಡಲು ಬರುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಣಿಕಮ್ಮ ಚಿತ್ತಾಪುರ, ದೇವಮ್ಮ ಆಳಂದ, ಎಲ್ಲಮ್ಮ ಚಿತ್ತಾಪುರ, ಲಕ್ಷ್ಮೀ ಸೊನ್ನ ಮೋನಿಕಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.






