ಕಲಬುರಗಿ| ಬೆಳೆ ವಿಮೆ ವಂಚನೆ ಖಂಡಿಸಿ ರೈತರಿಂದ ಆಕ್ರೋಶ; ಶೇ.100 ರಷ್ಟು ವಿಮೆ ಪರಿಹಾರ ನೀಡಲು ಆಗ್ರಹ

ಕಲಬುರಗಿ: 2026-27ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ವಿಮೆ ಮಾಡಿಸಿದ್ದು, ಸದ್ಯ ಮಳೆ ಅಭಾವದಿಂದಾಗಿ ಸರ್ಕಾರವು ಬರಗಾಲ ಘೋಷಣೆ ಮಾಡಿದೆ. ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಶೇ. 90ರಷ್ಟು ಬೆಳೆ ನಷ್ಟವಾಗಿರುವ ಬಗ್ಗೆ ವರದಿ ಸಲ್ಲಿಸಿದ್ದರೂ, ಇಂಡಸ್‌ಲ್ಯಾಂಡ್ ಜನರಲ್ ಇನ್ಶೂರೆನ್ಸ್ ಕಂಪನಿ (Indusland General Insurance Co.) ಅಧಿಕಾರಿಗಳು ಕೇವಲ ಶೇ. 45ರಷ್ಟು ಮಾತ್ರ ವಿಮೆ ಹಣ ನೀಡಲು ಮುಂದಾಗಿರುವುದು ರೈತರಿಗೆ ಎಸಗುತ್ತಿರುವ ದೊಡ್ಡ ವಂಚನೆ ಹಾಗೂ ಅನ್ಯಾಯವಾಗಿದೆ ಎಂದು ರೈತ ಮುಖಂಡರು ಆರೋಪಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಈಗಾಗಲೇ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ಬದುಕು ಬೀದಿಗೆ ಬಂದಿದೆ. ಇಂತಹ ಕಠಿಣ ಸಂದರ್ಭದಲ್ಲಿ ವಿಮಾ ಕಂಪನಿಯು ಅರ್ಧದಷ್ಟು ಮೊತ್ತವನ್ನು ಕಡಿತಗೊಳಿಸಿ ನೀಡುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಮೆ ಪಾವತಿಸಿಕೊಳ್ಳುವ ಸಂದರ್ಭದಲ್ಲಿ ಕಂಪನಿಯು ಈ ಬಗ್ಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಅಧಿಕಾರಿಗಳು ನ್ಯಾಯಯುತವಾಗಿ ನೀಡಿರುವ ಶೇ. 90ರಷ್ಟು ಬೆಳೆ ನಷ್ಟದ ವರದಿಯ ಆಧಾರದ ಮೇಲೆಯೇ ರೈತರ ಸಂಪೂರ್ಣ ವಿಮಾ ಹಣವನ್ನು ಬಿಡುಗಡೆ ಮಾಡಲು ವ್ಯವಸ್ಥೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾ ಆಡಳಿತಾಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು ಕೂಡಲೇ ವಿಮಾ ಕಂಪನಿಯ ಮೇಲೆ ಒತ್ತಡ ತಂದು ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ವಿಮಾ ಕಂಪನಿಯ ಇದೇ ಧೋರಣೆ ಮುಂದುವರಿದರೆ ರೈತರು ಮತ್ತಷ್ಟು ಆತ್ಮಹತ್ಯೆಯಂತಹ ದುರ್ಘಟನೆಗಳಿಗೆ ಶರಣಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿರುವ ಮುಖಂಡರು, ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸಮಸ್ತ ಕಲಬುರಗಿ ಜಿಲ್ಲಾ ರೈತರ ಪರವಾಗಿ ಆಗ್ರಹಿಸಿದರು.
ಈ ಪತ್ರಿಕಾ ಗೋಷ್ಠಿಯಲ್ಲಿ ಇಸ್ಮಾಯಿಲ್ ಮುಲಗೆ, ಮಲ್ಲಿಕಾರ್ಜುನ ಸಾವಳಗಿ, ರಮೇಶ್ ಕನಸಗೂರಂಡ, ಶರಣಪ್ಪ ಎಸ್. ಕೊತಲಿ, ಸಿದ್ರಾಮು ಟಿ. ಚಟ್ಟಿ, ಶಿವಲಿಂಗಪ್ಪ ಎಸ್. ಸಾವಳಗಿ ಸೇರಿದಂತೆ ಮುಂತಾದ ರೈತ ಮುಖಂಡರು ಉಪಸ್ಥಿತರಿದ್ದರು.






