Kalaburagi | ಖದೀರ್ ಪಾಷಾ ಆತ್ಮಹತ್ಯೆ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಕಲಬುರಗಿ : ರಟಕಲ್ ಗ್ರಾಮದ ಸೆಂಟ್ರಿಂಗ್ ಗುತ್ತಿಗೆದಾರ ಖದೀರ್ ಪಾಷಾ ಆತ್ಮಹತ್ಯೆ ಪ್ರಕರಣದ ಕುರಿತು ಪೊಲೀಸರು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಬಂಜಾರಾ ಸಮಾಜದ ಚಿತ್ತಾಪುರ ತಾಲೂಕು ಮುಖಂಡರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ಚೌಹಾಣ್ ಅವರು ವಿಡಿಯೋ ಮೂಲಕ ಖದೀರ್ ಪಾಷಾ ಯಾರೆಂಬುದೇ ತಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಖದೀರ್ ಪಾಷಾ ಹಾಗೂ ಅರವಿಂದ ಚೌಹಾಣ್ ನಡುವೆ ಯಾವುದೇ ಒಪ್ಪಂದ ಅಥವಾ ಮಾತುಕತೆ ನಡೆದಿದ್ದರೆ, ತನಿಖೆಯ ಮೂಲಕ ಸತ್ಯಾಂಶ ಬಹಿರಂಗವಾಗಬೇಕು ಎಂದು ಒತ್ತಾಯಿಸಿದರು.
ಅರವಿಂದ ಚೌಹಾಣ್ ರಾಜಕೀಯವಾಗಿ ಬೆಳೆಯುತ್ತಿರುವುದನ್ನು ಸಹಿಸದೆ ಕೆಲವರು ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯಾವುದೇ ಸಾಕ್ಷ್ಯಾಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ. ಪ್ರಕರಣದ ಸತ್ಯಾಸತ್ಯತೆ ಸಮಗ್ರ ತನಿಖೆಯಿಂದ ಹೊರಬರಬೇಕು ಎಂದು ಅವರು ಆಗ್ರಹಿಸಿದರು.
ಪ್ರಕರಣದಲ್ಲಿ ಯಾವುದೇ ರೀತಿಯ ಪೂರ್ವಗ್ರಹವಿಲ್ಲದೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡು ನಿಜಾಂಶವನ್ನು ಸಾರ್ವಜನಿಕರ ಮುಂದೆ ತರಬೇಕು ಎಂದು ಮುಖಂಡರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಗದೀಶ್ ಚೌಹಾನ್, ಚಂದು ಜಾಧವ್, ಭೋರು ರಾಠೋಡ, ವಿಜಯಕುಮಾರ್, ಶಿವರಾಮ ಪವಾರ್, ರವಿ ರಾಠೋಡ, ಮುಕೇಶ್ ರಾಠೋಡ, ಅವಿನಾಶ್ ಅರಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.






