Kalaburagi | ನೇರ ವೇತನ ಪಾವತಿ ವ್ಯವಸ್ಥೆ ಅಳವಡಿಸಲು ಆಗ್ರಹ

ಕಲಬುರಗಿ: ಬಾಕಿ ಇರುವ ಸಂಬಳವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಬುಧವಾರ ವಿವಿ ಕಾರ್ಯಸೌಧ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.
2026ರ ಎರಡು ತಿಂಗಳ ಬಾಕಿ ವೇತನವನ್ನು ಕೂಡಲೇ ಪಾವತಿಸಬೇಕು. ಪ್ರತಿ ತಿಂಗಳು 7ನೇ ತಾರೀಖಿನೊಳಗೆ ಕಡ್ಡಾಯವಾಗಿ ಸಂಬಳ ನೀಡಬೇಕು. ಕಾರ್ಮಿಕ ಇಲಾಖೆಯ ಆದೇಶದಂತೆ 2025-26 ಮತ್ತು 2026-27ನೇ ಸಾಲಿನ ತುಟ್ಟಿಭತ್ಯೆಯನ್ನು ವೇತನದೊಂದಿಗೆ ಸೇರಿಸಿ ಪಾವತಿಸಬೇಕು ಎಂದು ನೌಕರರು ಒತ್ತಾಯಿಸಿದರು.
ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸುಮಾರು 281 ಮಂದಿ ಹೊರಗುತ್ತಿಗೆ ನೌಕರರು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಾಯಂ ನೌಕರರಷ್ಟೇ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದರೂ ಉದ್ಯೋಗ ಭದ್ರತೆ ಇಲ್ಲದೆ ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿರುವುದಾಗಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಹೊರಗುತ್ತಿಗೆ ನೌಕರರಿಗೆ ನೇರ ವೇತನ ಪಾವತಿ ವ್ಯವಸ್ಥೆ ಜಾರಿಯಲ್ಲಿದ್ದು, ಅದೇ ಮಾದರಿಯನ್ನು ಇಲ್ಲಿ ಕೂಡ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ದೂರಿದರು.
ಕುಲಪತಿ ಹೇಳಿಕೆಗೆ ಆಕ್ರೋಶ :
ವಿಶ್ವವಿದ್ಯಾಲಯದ ಹೊಸ ಕುಲಪತಿ ಪ್ರೊ. ಉಡಿಕೇರಿ ಅವರು, “ಹೊರಗುತ್ತಿಗೆ ಸಿಬ್ಬಂದಿ ನಮ್ಮವರಲ್ಲ, ಗುತ್ತಿಗೆ ಸಂಸ್ಥೆಯವರೇ” ಎಂದು ಹೇಳಿರುವುದಕ್ಕೆ ನೌಕರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನೇಮಕಾತಿ ಆದೇಶದ ಪ್ರಕಾರ ತಾವು ವಿಶ್ವವಿದ್ಯಾಲಯದಲ್ಲೇ ಸೇವೆ ಸಲ್ಲಿಸುತ್ತಿದ್ದೇವೆ. ಹಿಂದಿನ ಕುಲಪತಿಗಳ ಅವಧಿಯಲ್ಲಿ ಇಂತಹ ಸಮಸ್ಯೆ ಎದುರಾಗಿರಲಿಲ್ಲ. ಈಗ ಮಾತ್ರ ಏಕೆ ಈ ರೀತಿಯ ನಿರ್ಲಕ್ಷ್ಯ ಎಂಬ ಪ್ರಶ್ನೆ ಎತ್ತಿದರು.
ಧರಣಿಯಲ್ಲಿ ನೌಕರರ ಸಂಘದ ಅಧ್ಯಕ್ಷ ಶೀಲಪ್ರಕಾಶ ದೊಡ್ಡಮನಿ, ಗೌರವ ಅಧ್ಯಕ್ಷ ವಿಜಯಕುಮಾರ ಕೆಂಗಲ, ಕಾರ್ಯದರ್ಶಿ ಚಂದ್ರಶಾ ಎಂ.ಎಸ್., ವಿಜಯ ಕೆಂಗಾಲ, ಅಂಬುಜಾ ಕದಂ, ಸವಿತಾ ಮಹೇಶ್ವರಿ, ನಾಗರಾಜ್ ಟೆಂಗಳಿ, ಸೇರಿದಂತೆ ಇತರೆ ನೌಕರರು ಇದ್ದರು.






