Kalaburagi | ಮುಂಗಾರು ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹ

ಕಲಬುರಗಿ: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಷ್ಟ್ರೀಯ ಮಹಿಳಾ ಮೀಸಲಾತಿ ಒಕ್ಕೂಟದ ಕಲಬುರಗಿ ಜಿಲ್ಲಾ ಘಟಕದಿಂದ ಸೋಮವಾರ ನಗರದಲ್ಲಿ ಪೋಸ್ಟರ್ ಬಿಡುಗಡೆ ಹಾಗೂ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಜನಗಣತಿ ಹಾಗೂ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನು ನೆಪವಾಗಿಸದೆ, ಈಗಿರುವ ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಆಧಾರದ ಮೇಲೆಯೇ ಮುಂದಿನ ಚುನಾವಣೆಯಿಂದಲೇ ಶೇ.33ರ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಮುಂಗಾರು ಅಧಿವೇಶನದಲ್ಲೇ ಅಗತ್ಯ ಮಸೂದೆ ಮಂಡಿಸಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.
ಅಭಿಯಾನದ ಅಂಗವಾಗಿ ಹಿರಿಯ ಸಾಹಿತಿಗಳಾದ ಆರ್.ಕೆ. ಹುಡಗಿ, ಡಾ. ಮೀನಾಕ್ಷಿ ಬಾಳಿ, ಕೆ. ನೀಲಾ, ವಿಜಯಕುಮಾರ ತೇಗಲತಿಪ್ಪಿ ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರಿಂದ ಮಹಿಳಾ ಮೀಸಲಾತಿ ಪರವಾಗಿ ಸಹಿ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತೀಯ ಮಹಿಳಾ ಒಕ್ಕೂಟದ ಮುಖಂಡರು ಮಹಿಳಾ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ನೇತೃತ್ವವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ ಹಾಗೂ ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ಪದ್ಮಾ ಪಾಟೀಲ್ ವಹಿಸಿದ್ದರು.
ತೇಜಮ್ಮ, ಶಮೀಮ್ ಬಾನು, ನಾಗಮ್ಮ, ಸುಜಾತ, ವಿದ್ಯಾಶ್ರೀ ಸೇರಿದಂತೆ ಹಲವಾರು ಮಹಿಳಾ ಮುಖಂಡರು, ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿ ಮಹಿಳಾ ಮೀಸಲಾತಿಯನ್ನು ಯಾವುದೇ ವಿಳಂಬವಿಲ್ಲದೆ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.






