Kalaburagi | ಶ್ರೀನಿವಾಸ ಸರಡಗಿ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆಗೆ ಆಗ್ರಹ

ಕಲಬುರಗಿ : 2025-26ನೇ ಸಾಲಿನ ಬೆಳೆವಿಮೆ ಪರಿಹಾರವನ್ನು ಶ್ರೀನಿವಾಸ ಸರಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಅರ್ಹ ರೈತರ ಖಾತೆಗಳಿಗೆ ತಕ್ಷಣ ಜಮಾ ಮಾಡಬೇಕು ಎಂದು ಆಗ್ರಹಿಸಿ ಗ್ರಾಮದ ರೈತರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಅವರಿಗೆ ಮನವಿ ಸಲ್ಲಿಸಿದರು.
ಬೆಳೆವಿಮೆ ಪೋರ್ಟಲ್‌ನಲ್ಲಿ ಶ್ರೀನಿವಾಸ ಸರಡಗಿ ಗ್ರಾಮಕ್ಕೆ “Shortfall ಶೇ.1.031481” ಎಂದು ದಾಖಲಾಗಿದ್ದರೂ, ತಾಂತ್ರಿಕ ಸಮಸ್ಯೆಯಿಂದ ಗ್ರಾಮದ ರೈತರಿಗೆ ಎರಡನೇ ಕಂತಿನ ಬೆಳೆವಿಮೆ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ ಎಂದು ಆರೋಪಿಸಲಾಗಿದೆ. ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳ ರೈತರಿಗೆ ಪರಿಹಾರ ಬಿಡುಗಡೆಯಾಗಿದ್ದರೂ, ಶ್ರೀನಿವಾಸ ಸರಡಗಿ ಗ್ರಾಮದ ರೈತರು ಮಾತ್ರ ವಂಚಿತರಾಗಿರುವುದು ಆತಂಕಕಾರಿ ಎಂದು ರೈತರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕಳೆದ ವರ್ಷ ಅತಿವೃಷ್ಟಿಯಿಂದ ಸುಮಾರು ಶೇ.90ರಷ್ಟು ಬೆಳೆಹಾನಿ ಸಂಭವಿಸಿದ್ದು, ಬಳಿಕ ಮಳೆಯ ಕೊರತೆಯಿಂದ ಮರುಬಿತ್ತನೆಯೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೀಜ, ಗೊಬ್ಬರ ಹಾಗೂ ಇತರೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಹಣಕ್ಕಾಗಿ ಬೆಳೆವಿಮೆ ಪರಿಹಾರವನ್ನೇ ಅವಲಂಬಿಸಿದ್ದಾರೆ. ಆದರೆ ಪರಿಹಾರ ವಿಳಂಬವಾಗುತ್ತಿರುವುದರಿಂದ ರೈತರಲ್ಲಿ ತೀವ್ರ ನಿರಾಸೆ ಹಾಗೂ ಆತಂಕ ಉಂಟಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ, ಬೆಳೆವಿಮೆ ಪೋರ್ಟಲ್‌ನಲ್ಲಿರುವ Shortfall ಹಾಗೂ Status ಸಂಬಂಧಿತ ತಾಂತ್ರಿಕ ಸಮಸ್ಯೆಯನ್ನು ಕೂಡಲೇ ಪರಿಶೀಲಿಸಿ, ಶ್ರೀನಿವಾಸ ಸರಡಗಿ ಗ್ರಾಮದ ಎಲ್ಲ ಅರ್ಹ ರೈತರಿಗೆ 2025-26ನೇ ಸಾಲಿನ ಬೆಳೆವಿಮೆ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂದು ರೈತರು ಸರ್ಕಾರ ಹಾಗೂ ಕೃಷಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಗಯ್ಯ ಸ್ವಾಮಿ ಹಿರೇಮಠ, ಸಂತೋಷ್ ಆಡೆ, ಆಕಾಶ್ ರಾಥೋಡ್, ಲಿಂಗರಾಜ ಮಾಲಿ ಪಾಟೀಲ್, ದತ್ತು ಜಾದವ್, ಈರಣ್ಣಗೌಡ ನಾಗಶೆಟ್ಟಿ, ಪ್ರವೀಣ ತಂಗಾ, ನಾಗಪ್ಪಗೌಡ, ಸಂತೋಷ್ ಗಂಗಾಣಿ, ಬಸವರಾಜ ಅತಿಥಿ, ಸಿದ್ದಣ್ಣ ಅತಿಥಿ, ಶರಣು ಶ್ರೀಮನಿ, ಶಿವರಾಜ್ ಮಾಲಿ ಪಾಟೀಲ್, ಈರಣ್ಣ ವಾಡಿ, ಸುಭಾಷ್ ಗಂಗಾಣಿ, ಶಿವರಾಜ್ ಗೋ ನಾಯಕ್, ದಯಾನಂದ ಗಂಗಾಣಿ, ಧೂಳಯ್ಯಸ್ವಾಮಿ ಹೊಸಮನಿ ಹೊಸಮಠ, ಸಂಜು ಕುಮಾರ್, ಶರಣಗೌಡ ಬಿರಾದಾರ್, ಸೋಮಶೇಖರ್ ಹಡಪದ್, ಮಲ್ಲಯ್ಯಸ್ವಾಮಿ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.






