ಕಲಬುರಗಿ | ಪ್ರತ್ಯೇಕ ರಾಜ್ಯದ ಬೇಡಿಕೆ ಕಿತ್ತೂರು ಕರ್ನಾಟಕದವರ ಕುತಂತ್ರ : ಡಾ.ಲಕ್ಷ್ಮಣ್ ದಸ್ತಿ

ಕಲಬುರಗಿ : ಕಿತ್ತೂರು ಕರ್ನಾಟಕದ ನಾಯಕರು ಮತ್ತು ಸಂಘಟನೆಗಳು ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಬೇಡಿಕೆಯ ಹೆಸರಿನಲ್ಲಿ ಕುತಂತ್ರ ನಡೆಸುತ್ತಿದ್ದಾರೆ. ಕೂಡಲೇ ಈ ಬೇಡಿಕೆ ಕೈಬಿಡದಿದ್ದರೆ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ತೀವ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ್ ದಸ್ತಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಲಕ್ಷ್ಮಣ್ ದಸ್ತಿ, 15 ಜಿಲ್ಲೆಗಳ ಉತ್ತರ ಕರ್ನಾಟಕ ರಚನೆಯ ಬಗ್ಗೆ ಶಾಸಕ ರಾಜು ಕಾಗೆ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರಕ್ಕೆ ಪ್ರತಿಯಾಗಿ ಸಮಿತಿ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಬಲವಾಗಿ ಖಂಡಿಸಿದೆ. ಈ ಕುರಿತು ಸದನದಲ್ಲಿ ಕೂಗು ಕೇಳಿಬಂದರೆ ನಮ್ಮ ಭಾಗದ ಶಾಸಕರು ಇಂತಹ ಬೇಡಿಕೆಯನ್ನು ತಿರಸ್ಕಾರ ಮಾಡಬೇಕೆಂದು ಕಲ್ಯಾಣ ಕರ್ನಾಟಕದ ಶಾಸಕ, ಸಚಿವರಿಗೆ ಒತ್ತಾಯ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆರ್.ಕೆ ಹುಡಗಿ, ಸಮಿತಿಯ ಮುಖಂಡರಾದ ಡಾ.ಬಸವರಾಜ ದೇಶಮುಖ್, ಪ್ರೊ. ಬಸವರಾಜ ಗುಲಶೆಟ್ಟಿ, ಮನೀಷ್ ಜಾಜು, ಡಾ.ಶರಣಪ್ಪ ಸೈದಾಪೂರ, ಚಂದ್ರಶೇಖರ ಪಾಟೀಲ್ ಹುಚಕನಳ್ಳಿ, ರೌಫ್ ಖಾದ್ರಿ, ಲಿಂಗರಾಜ ಸಿರಗಾಪೂರ, ಎಂ.ಬಿ. ನಿಂಗಪ್ಪ, ಅಸ್ಲಂ ಚೌಂಗೆ ಉಪಸ್ಥಿತರಿದ್ದರು.





