Kalaburagi | 371ಜೆ ಸಮರ್ಪಕ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ

ಕಲಬುರಗಿ : ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಅಸಮತೋಲನ ನಿವಾರಣೆ ಹಾಗೂ ಸಂವಿಧಾನದ 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನಕ್ಕಾಗಿ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದೆ.
ಸಮಿತಿಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಎಲ್ಲ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದೆ.
371ಜೆ ನೇಮಕಾತಿ ಮತ್ತು ಬಡ್ತಿ ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಪ್ರತ್ಯೇಕ ಆಡಳಿತಾತ್ಮಕ ನ್ಯಾಯಮಂಡಳಿ ಸ್ಥಾಪಿಸಿ, ಅದನ್ನು ಕಲಬುರಗಿಯಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆಪಿಎಸ್‌ಸಿ ಮತ್ತು ಕೆಇಎ ಪ್ರಾದೇಶಿಕ ಕಚೇರಿಗಳನ್ನು ಕಲ್ಯಾಣ ಕರ್ನಾಟಕದಲ್ಲಿ ಸ್ಥಾಪಿಸುವುದು, ವಿಶ್ವವಿದ್ಯಾಲಯಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಹಾಗೂ 371ಜೆ ಅನುಷ್ಠಾನ ಪ್ರಾಧಿಕಾರ ರಚಿಸುವಂತೆ ಸಮಿತಿ ಆಗ್ರಹಿಸಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕ್ರಮ ಕೈಗೊಳ್ಳುವುದು, ಕಲಬುರಗಿಯ ಪಿಎಂ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಕಾಮಗಾರಿಯನ್ನು ಶೀಘ್ರ ಆರಂಭಿಸುವುದು ಸೇರಿದಂತೆ ಹಲವು ಅಭಿವೃದ್ಧಿ ಬೇಡಿಕೆಗಳನ್ನೂ ಮುಂದಿಟ್ಟಿದೆ.
ಕೆಕೆಆರ್‌ಡಿಬಿ ಅನುದಾನದ ಪರಿಣಾಮಕಾರಿ ಬಳಕೆಗೆ 10 ವರ್ಷಗಳ ಕ್ರಿಯಾಯೋಜನೆ ರೂಪಿಸಬೇಕು. ಜೊತೆಗೆ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸಿ ಆರೋಗ್ಯ ಸೇವೆಗಳನ್ನು ಬಲಪಡಿಸಬೇಕು ಎಂದು ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ, ಗೌರವಾಧ್ಯಕ್ಷ ಸಿ.ಪನ್ನರಾಜ್, ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಕೆ. ನೀಲಾ, ಜಿಲ್ಲಾಧ್ಯಕ್ಷೆ ಮೀನಾಕ್ಷಿ ಬಾಳಿ, ಹರವಿ ನಾಗನಗೌಡ, ಬಿ. ಬಸವರಾಜ, ಜಾನ್ ವೆಸ್ಲಿ, ಆರ್. ಬಸವರಾಜ, ನಾಗೇಂದ್ರ ಥಂಬೆ, ಪಿಡ್ಡಪ್ಪ ಜಾಲಗಾರ, ಅರ್ಜುನ್ ಭದ್ರೆ, ಮಲ್ಲಿಕಾರ್ಜುನ ಸತ್ಯಂಪೇಟೆ, ಪಂಡಿತರಾವ್ ಚಿದ್ರಿ, ಮಲ್ಲಿಕಾರ್ಜುನ ರೆಡ್ಡಿ, ಮರೆಪ್ಪ ಹಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






