Kalaburagi | ಅಂಬಿಗರ ಚೌಡಯ್ಯ ಗದ್ದುಗೆ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರ ರಚಿಸುವಂತೆ ಆಗ್ರಹ

ಕಲಬುರಗಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡದಾನಪುರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂಲ ಗದ್ದುಗೆಗೆ ಸಮಗ್ರ ಅಭಿವೃದ್ಧಿ ಕಲ್ಪಿಸಿ, ಅದರ ಸಂರಕ್ಷಣೆ ಮತ್ತು ವಚನ ಪರಂಪರೆಯ ಉಳಿವಿಗಾಗಿ ವಿಶೇಷ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಶ್ರೀ ಅಂಬಿಗರ ಸೇವಾದಳ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸೇವಾದಳದ ಪದಾಧಿಕಾರಿಗಳು, ಸರ್ಕಾರಕ್ಕೆ ಮನವಿ ಸಲ್ಲಿಸಿ ಅಂಬಿಗರ ಚೌಡಯ್ಯ ಅವರ ಇತಿಹಾಸ, ವಚನ ಸಾಹಿತ್ಯ, ಸಾಮಾಜಿಕ ಸಂದೇಶ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾನೂನುಬದ್ಧ ಸ್ಥಾನಮಾನ ಹೊಂದಿದ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆಂದು ಒತ್ತಾಯಿಸಿದರು.
ಅಂಬಿಗರ ಚೌಡಯ್ಯ ಅವರು 12ನೇ ಶತಮಾನದ ಶಿವಶರಣ ಹಾಗೂ ವಚನಕಾರರಾಗಿದ್ದು, ಬಸವಣ್ಣನವರ ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದಾರೆ. ಅವರ ವಚನಗಳು ಸಾಮಾಜಿಕ ಅಸಮಾನತೆ, ಮೂಢನಂಬಿಕೆ ನಿರ್ಮೂಲನೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಗದ್ದುಗೆ ಆವರಣದಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ, ವಿದ್ಯುತ್, ವಾಹನ ನಿಲುಗಡೆ ಸೇರಿದಂತೆ ಭಕ್ತರು ಮತ್ತು ಪ್ರವಾಸಿಗರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಜೊತೆಗೆ ಅಂಬಿಗರ ಚೌಡಯ್ಯ ಅವರ ಜೀವನ, ವಚನಗಳು ಮತ್ತು ಸಾಮಾಜಿಕ ಚಿಂತನೆಗಳನ್ನು ಪರಿಚಯಿಸುವ ಸಂಗ್ರಹಾಲಯ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಲಾಗಿದೆ.
ಕೂಡಲಸಂಗಮ ಮಾದರಿಯಲ್ಲಿ ಗದ್ದುಗೆ ಅಭಿವೃದ್ಧಿಪಡಿಸಿ, ಸಮಗ್ರ ಸಮೀಕ್ಷೆಯ ಬಳಿಕ ಮಾಸ್ಟರ್ ಪ್ಲಾನ್ ಮತ್ತು ಡಿಪಿಆರ್ ಸಿದ್ಧಪಡಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಕ್ಯೂಆರ್ ಕೋಡ್ ಆಧಾರಿತ ಮಾಹಿತಿ ವ್ಯವಸ್ಥೆ, ಡಿಜಿಟಲ್ ಮ್ಯೂಸಿಯಂ ಹಾಗೂ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಾಹಿತಿ ಒದಗಿಸುವ ವ್ಯವಸ್ಥೆ ರೂಪಿಸಬೇಕು ಎಂದು ಸೇವಾದಳ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಸೇವಾದಳದ ಜಿಲ್ಲಾ ಅಧ್ಯಕ್ಷ ಆನಂದ ಕದ್ದರಗಿ, ವಿವಿಧ ಮಠಾಧೀಶರು, ಶರಣಪ್ಪ ತಳವಾರ್, ಲಚ್ಚಪ್ಪ ಜಮಾದಾರ್, ಶಾಂತಪ್ಪ ಕೂಡಿ, ಬಸವರಾಜ್ ಬೂದಿಹಾಳ್, ಸಂತೋಷ ಬೆಣ್ಣೂರ, ಶಿವಾನಂದ್ ಹೊನಗುಂಟಿ, ವಿಶ್ವನಾಥ ಮೂಲಗೆ, ದಶರಥ ನಾಯಿಕೋಡಿ, ಜಗನಾಥ ಜಮದಾರ್, ನಂದು ಜೀವಣಗಿ, ಶರಣು ಮಲ್ಲಾಬಾದಿ, ಸಿದ್ದು ನಾಟಿಕಾರ್ ನಂದೂರ್, ಸಂತೋಷ ಹಿಪರ್ಗಿ, ಅಶೋಕ್ ಕದ್ದರ್ಗಿ, ವಿನೀತ್ ಸಾದ್ಲಾಪುರ ಹಾಗೂ ಶ್ರೀಕಾಂತ್ ಕದ್ದರ್ಗಿ ಸೇರಿದಂತೆ ಹಲವರಿದ್ದರು.






