ಕಲಬುರಗಿ | ಬಸವಣ್ಣ, ಅಕ್ಕಮಹಾದೇವಿಯವರಿಗೆ ನಿಂದಿಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹ

ಕಲಬುರಗಿ: ವಿಶ್ವಗುರು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಕಾಮೆಂಟ್ ಮಾಡಿರುವ ರಾಮಕಾಂತ ಎಂ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ನಗರದ ಜಗತ್ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿ ಎದುರುಗಡೆ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರಾಮಕಾಂತ ಎಂ. ಎಂಬ ವ್ಯಕ್ತಿಯು ಸಾಮಾಜಿಕ ಜಾಲತಾಣವಾದ ಫೇಸ್ಬುಕ್‌ನಲ್ಲಿ ವಿಶ್ವಗುರು ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ಕುರಿತು ಅವಹೇಳನಕಾರಿ ಮತ್ತು ಅಸಭ್ಯ ಹೇಳಿಕೆಗಳನ್ನು ಪ್ರಕಟಿಸಿ, ಶರಣ ಸಂಪ್ರದಾಯ ಹಾಗೂ ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಪ್ರಚಾರ ಮಾಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಸಮಾಜದಲ್ಲಿ ತೀವ್ರ ಅಸಮಾಧಾನ ಉಂಟಾಗಿ ಅಶಾಂತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹಾಗಾಗಿ ಅಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಮಾಜದ ಶಾಂತಿ ಮತ್ತು ಸೌಹಾರ್ದ ಕಾಪಾಡುವ ಹಿತದೃಷ್ಟಿಯಿಂದ ಸಂಬಂಧಿತ ವ್ಯಕ್ತಿಯ ವಿರುದ್ಧ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು, ಆತನನ್ನು ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಲಿಂಗಾಯತ ಮಹಾಸಭಾದ ಅಧ್ಯಕ್ಷ ಆರ್. ಜಿ. ಶೆಟಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಗೂಳಿ, ಡಾ.ಮಲ್ಲಿಕಾರ್ಜುನ ವಡ್ಡನಕೇರಿ, ಹಣಮಂತರಾವ ಪಾಟೀಲ, ಸಿದ್ದಣ್ಣ ತಾವರಗೇರ, ಶಿವಶರಣಪ್ಪ ಡಿ, ವಿಶ್ವನಾಥ ಮಂಗಲಗಿ, ಶಿವಕುಮಾಋ ಬಿದರಿ, ಅಶೋಕ ವೀರನಾಯಕ, ದಿನೇಶ ದೊಡ್ಡಮನಿ, ಬಸವರಾಜ ಸೇರಿದಂತೆ ಇತರರು ಇದ್ದರು.







