Kalaburagi | ಮಾದರ ಚನ್ನಯ್ಯ ಹೆಸರಿನಲ್ಲಿ ಮುಖ್ಯ ದ್ವಾರ ನಿರ್ಮಿಸಲು ಆಗ್ರಹ

ಕಲಬುರಗಿ: ನಗರದ ಜೇವರ್ಗಿ ಪಟ್ಟಣಕ್ಕೆ ತೆರಳುವ ರಾಜ್ಯ ಹೆದ್ದಾರಿಯ ರಾಮಮಂದಿರ ವೃತ್ತದ ಸಮೀಪ 12ನೇ ಶತಮಾನದ ಶ್ರೇಷ್ಠ ಶರಣರಾದ ಶ್ರೀ ಶಿವಶರಣ ಮಾದರ ಚನ್ನಯ್ಯ ಅವರ ಹೆಸರಿನಲ್ಲಿ ಮುಖ್ಯ ದ್ವಾರ (ಹೆಬ್ಬಾಗಿಲು) ನಿರ್ಮಿಸುವಂತೆ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಲಬುರಗಿ ವಿಭಾಗದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡರು, ಬಸವಣ್ಣನವರ ಕಾಲದಲ್ಲಿ ಸಮಾನತೆ, ಸರ್ವಧರ್ಮ ಸಮಭಾವ ಹಾಗೂ ಸಾಮಾಜಿಕ ಏಳಿಗೆಗಾಗಿ ಶಿವಶರಣ ಮಾದರ ಚನ್ನಯ್ಯ ಅವರು ವಚನಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕದೊಂದಿಗೆ ಅವರ ಸಾಮಾಜಿಕ ಹಾಗೂ ವೈಚಾರಿಕ ಕೊಡುಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ಮಾದರ ಚನ್ನಯ್ಯ ಅವರ ವಚನಗಳು ಹಾಗೂ ಸಮಾನತೆಯ ಸಂದೇಶವನ್ನು ಪರಿಚಯಿಸುವ ಉದ್ದೇಶದಿಂದ, ಅವರ ಸವಿ ನೆನಪಿಗಾಗಿ ನಗರದ ಪ್ರಮುಖ ಸ್ಥಳದಲ್ಲಿ ಹೆಬ್ಬಾಗಿಲು ನಿರ್ಮಿಸುವುದು ಸೂಕ್ತವಾಗಿದೆ. ಆದ್ದರಿಂದ ರಾಮಮಂದಿರ ವೃತ್ತದ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅವರ ಹೆಸರಿನಲ್ಲಿ ಮುಖ್ಯ ದ್ವಾರ ನಿರ್ಮಿಸಲು ಅಗತ್ಯ ಅನುಮತಿ ನೀಡುವುದರೊಂದಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತವನ್ನು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ. ನಾಟಿಕಾರ, ಜಿಲ್ಲಾ ಅಧ್ಯಕ್ಷ ಸಿದ್ದಲಿಂಗ ಕಟ್ಟಿಮನಿ, ಹಿರಿಯ ಉಪಾಧ್ಯಕ್ಷ ಮಹಾದೇವಪ್ಪ ಕವಳೆ, ಜೈರಾಜ ಕಿಣಗೀಕರ್, ಸುಂದರ ಡಿ. ಸಾಗರ, ಮಲ್ಲಿಕಾರ್ಜುನ ಕಟ್ಟಿಮನಿ, ಬೈರಜು ಉಗಿಕರ, ಜಗನ್ನಾಥ ಮಾಂಗ, ಜಾನಪ್ಪ ಶಿವನೂರ, ಆನಂದ ತೆಗನೂರ, ರುಕ್ಕಪ್ಪ ಟಿ. ಕಾಂಬಳೆ, ಮಲ್ಲಿಕಾರ್ಜುನ ಚಟ್ನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






