Kalaburagi | ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮಹಿಳಾ ಸ್ನೇಹಿಗೆ ಒತ್ತು ನೀಡುವಂತೆ ಆಗ್ರಹ

ಕಲಬುರಗಿ : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮಹಿಳಾ ಸ್ನೇಹಿ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಕಲಬುರಗಿ ಜಿಲ್ಲಾ ಸಮಿತಿಯು ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯುತ್ತಿದ್ದು, ಈಗ ಕರ್ನಾಟಕದಲ್ಲಿಯೂ ಮೂರನೇ ಹಂತದಲ್ಲಿ ಜಾರಿಯಾಗುತ್ತಿದೆ. ಈಗಾಗಲೇ ಪರಿಷ್ಕರಣೆ ನಡೆದಿರುವ ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣದ ಹೆಸರಿನಲ್ಲಿ ಅರ್ಹ ಮತದಾರರನ್ನು ಹೊರಗಿಡುವ ಪ್ರವೃತ್ತಿ ಹೆಚ್ಚಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾನಿಗೊಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾದವರಲ್ಲಿ ಸುಮಾರು 22.70 ಲಕ್ಷ ಮಹಿಳೆಯರು ಇದ್ದರೆ, ಮಧ್ಯಪ್ರದೇಶದಲ್ಲಿ 23.60 ಲಕ್ಷ ಮಹಿಳೆಯರು ಪಟ್ಟಿಯಿಂದ ಹೊರಗುಳಿದಿದ್ದು, ಇದು ಪುರುಷರಿಗಿಂತಲೂ ಹೆಚ್ಚಾಗಿದೆ. ಈ ತರಹ ಜಿಲ್ಲೆಯಲ್ಲಿ ಸಂಭವಿಸಬಾರದು ಎಂದು ಚುನಾವಣಾಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಮಹಿಳೆಯರ ಹೆಸರಿನಲ್ಲಿರುವ ಇನಿಷಿಯಲ್, ಕಾಗುಣಿತ ಮತ್ತು ಲಿಂಗ ಸೂಚಕ ವ್ಯತ್ಯಾಸಗಳನ್ನು ಅಸಂಗತ ಮಾಹಿತಿಯೆಂದು ಪರಿಗಣಿಸುವುದು, ಸೊಸೆಯಾಗಿ ಬಂದ ಮಹಿಳೆಯರಿಗೆ ನೋಂದಣಿಯಲ್ಲಿ ಉಂಟಾಗುವ ತೊಂದರೆಗಳು, ಬಾಲ್ಯ ವಿವಾಹದ ಪರಿಣಾಮವಾಗಿ ವಯೋಮಾನದ ಆಧಾರದ ಮೇಲೆ ಅನುಮಾನಾಸ್ಪದ ಪಟ್ಟಿಗೆ ಸೇರಿಸುವ ಕ್ರಮಗಳು ಸೇರಿದಂತೆ ಹಲವು ಅಂಶಗಳು ಮಹಿಳೆಯರ ಮೇಲೆ ನೇರ ಪರಿಣಾಮ ಬೀರುತ್ತಿವೆ ಎಂದು ಆರೋಪಿಸಿದ್ದಾರೆ.
ಹಾಗಾಗಿ ಜೂನ್ 30ರಿಂದ ಜಿಲ್ಲೆಯಲ್ಲಿ ಆರಂಭವಾಗಲಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವೇಳೆ ಮಹಿಳೆಯರು ಹಾಗೂ ದುರ್ಬಲ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಪದ್ಮಿನಿ ಕಿರಣಗಿ, ಖಜಾಂಚಿ ಸುಜಾತಾ, ಉಪಾಧ್ಯಕ್ಷೆ ಚಂದಮ್ಮ, ನಾಗಮ್ಮ, ಅರುಣಾ ಹಾಗೂ ಸೆಮಿಮಬಾನು ಉಪಸ್ಥಿತರಿದ್ದರು.






