Kalaburagi | ಪಡಿತರ ವಿತರಕರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಕಲಬುರಗಿ : ಬಾಕಿ ಕಮಿಷನ್ ಹಣ ಪಾವತಿ ಸೇರಿದಂತೆ ಪಡಿತರ ವಿತರಕರು ಎದುರಿಸುತ್ತಿರುವ ವಿವಿಧ ಗಂಭೀರ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಕಲಬುರಗಿ ಜಿಲ್ಲಾ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಪ್ರತಿ ತಿಂಗಳು ಯಾವುದೇ ಬಾಕಿ ಉಳಿಸಿಕೊಳ್ಳದೆ ವಿತರಕರ ಕಮಿಷನ್ ಹಣವನ್ನು ನಿಯಮಿತವಾಗಿ ಪಾವತಿಸಬೇಕು. ಸಗಟು ಮಳಿಗೆಗಳಿಂದ ಪಡಿತರ ಧಾನ್ಯವನ್ನು ವಿಳಂಬವಿಲ್ಲದೆ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ಎದುರಾಗುತ್ತಿರುವ ನೆಟ್ವರ್ಕ್ ಹಾಗೂ ಸರ್ವರ್ ಸಮಸ್ಯೆಗಳಿಂದ ಪಡಿತರ ವಿತರಣೆಗೆ ಅಡಚಣೆಯಾಗುತ್ತಿದೆ. ಆದ್ದರಿಂದ ತಾಂತ್ರಿಕ ದೋಷಗಳನ್ನು ತಕ್ಷಣ ನಿವಾರಿಸಬೇಕು. ಕಳೆದ 45 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಿರಿಯ ವಿತರಕರಿಗೆ ಅನುಬಂಧದ ಆಧಾರದ ಮೇಲೆ ವಿಧಿಸಲಾಗಿರುವ ಗರಿಷ್ಠ ವಯೋಮಿತಿ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಪಡಿತರ ಧಾನ್ಯ ಸರಬರಾಜು ಮಾಡುವಾಗ ಸೂಕ್ತ ಮತ್ತು ನಿಖರವಾದ ತೂಕದೊಂದಿಗೆ ಪೂರೈಸಬೇಕು. ಬಾಕಿ ಇರುವ ಇ-ಕೆವೈಸಿ ಕಮಿಷನ್ ಹಾಗೂ ಬರಗಾಲ ಘೋಷಣೆಯ ಪರಿಹಾರದ ಹಣವನ್ನು ಡಿಬಿಟಿ ಮೂಲಕ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ದ್ವೇಷಪೂರಿತ ಅಥವಾ ಸುಳ್ಳು ದೂರುಗಳ ಆಧಾರದ ಮೇಲೆ ವಿತರಕರಿಗೆ ಅನಗತ್ಯವಾಗಿ ದಂಡ ವಿಧಿಸುವುದನ್ನು ನಿಲ್ಲಿಸಬೇಕು. ಯಾವುದೇ ಕ್ರಮ ಕೈಗೊಳ್ಳುವ ಮೊದಲು ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿ ವಿತರಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಮೊಹಮ್ಮದ್ ಮುಖೀದ್, ಅಧ್ಯಕ್ಷ ಶಾಂತಪ್ಪ ಆರ್. ಪಾಟೀಲ, ಉಪಾಧ್ಯಕ್ಷ ಸುಭಾಷ್ ಹೆಚ್. ಚೌಧರಿ, ಪ್ರಧಾನ ಕಾರ್ಯದರ್ಶಿ ಪರಮೇಶ್ವರ ಎಸ್. ಚೀಲ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.






