Kalaburagi | ಭೂಸ್ವಾಧೀನಗೊಂಡ ಜಮೀನು ರೈತರಿಗೆ ವಾಪಸ್ ನೀಡಲು ಆಗ್ರಹ

ಕಲಬುರಗಿ : ಗುಲಬರ್ಗ ಸಿಮೆಂಟ್ ಕಾರ್ಖಾನೆ ಸ್ಥಾಪನೆ ಉದ್ದೇಶಕ್ಕಾಗಿ ಭೂಸ್ವಾಧೀನಗೊಂಡಿದ್ದ ಕಿರಣಗಿ, ಫಿರೋಜಾಬಾದ್ ಹಾಗೂ ಸೋಮನಾಥಹಳ್ಳಿ ಗ್ರಾಮದ 1821 ಎಕರೆ ಜಮೀನನ್ನು ರೈತರಿಗೆ ವಾಪಸ್ ನೀಡುವಂತೆ ಆಗ್ರಹಿಸಿ ಭೂಮಿ ನೀಡಿದ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಾರ್ಖಾನೆ ನಿರ್ಮಾಣ ಮಾಡುವುದಾಗಿ ಹೇಳಿ ಹಲವು ವರ್ಷಗಳ ಹಿಂದೆ ಭೂಸ್ವಾಧೀನ ಮಾಡಿಕೊಂಡಿದ್ದರೂ ಇದುವರೆಗೆ ಯಾವುದೇ ಕೈಗಾರಿಕೆ ಸ್ಥಾಪನೆ ಮಾಡಿಲ್ಲ. ಇದರಿಂದ ರೈತರು ಜೀವನೋಪಾಯ ಕಳೆದುಕೊಂಡಿದ್ದು, ಸರ್ಕಾರ ಹಾಗೂ ಕಂಪನಿ ರೈತರಿಗೆ ಅನ್ಯಾಯ ಮಾಡಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಭೂಸ್ವಾಧೀನದ ಉದ್ದೇಶ ಈಡೇರಿಸದೇ ಕಾನೂನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಜಮೀನನ್ನು ಮೂಲ ರೈತರಿಗೆ ಮರಳಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ಶಂಕ್ರೆಪ್ಪಾ ಗೊಬ್ಬುರು, ಇರಣ್ಣಾ ಉಳಾಗಡ್ಡಿ, ಭಿಮಾಶಂಕರ ಸರಡಗಿ, ಪ್ರಭು ಭೈರಾಡಗಿ, ಸಿದ್ದಮ್ಮ ನರಿಬೊಳಿ, ಗುರಮ್ಮಾ ರಾವುರು, ನಾಗಮ್ಮಾ ಮಡಿಕ್ಯಾಳ ಸೇರಿದಂತೆ ಕಿರಣಗಿ, ಫಿರೋಜಾಬಾದ್ ಹಾಗೂ ಸೋಮನಾಥಹಳ್ಳಿ ಗ್ರಾಮದ ಭೂ ಸಂತ್ರಸ್ತ ರೈತರು ಭಾಗವಹಿಸಿದ್ದರು.






