ಕಲಬುರಗಿ | ವಿಬಿ ಜಿ ರಾಮ್ ಜಿ ಕಾಯ್ದೆ ಹಿಂಪಡೆಯುವಂತೆ ಆಗ್ರಹ

ಕಲಬುರಗಿ: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ಹಿಂದಿನ ಮನರೇಗಾ ಕಾಯ್ದೆಯನ್ನೇ ಪುನಃ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಸಿ.ಇ.ಓ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಹೊಸದಾಗಿ ವಿಬಿ ಜಿ ರಾಮ್ ಜಿ ಕಾಯ್ದೆ ತಂದಿರುವ ಕೇಂದ್ರದ ಬಿಜೆಪಿ ಸರಕಾರ, ದೇಶದ ರೈತ, ಕೃಷಿ ಕಾರ್ಮಿಕರಿಗೆ ಮೋಸ ಮಾಡಿದೆ. ಮೊದಲಿನಂತೆ ಸುಗಮವಾಗಿ ಸಿಗುವ ಕೆಲಸವನ್ನು ಇದೀಗ ಬಿಕ್ಕಟ್ಟಿಗೆ ಸಿಲುಕಿಸಿದೆ ಎಂದು ಆರೋಪಿಸಿದರು.
ಮನರೇಗಾ ಕಾಯ್ದೆಯಲ್ಲಿ ನೂರು ದಿನಗಳ ಗ್ಯಾರಂಟಿ ಕೆಲಸ ಸಿಗುತ್ತಿತ್ತು. ಆದರೆ ಈ ಕಾಯ್ದೆ ಜಾರಿ ಮಾಡಿ 125 ದಿನಗಳ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಹೇಳುತ್ತಿದೆ. ಎರಡು ತಿಂಗಳು ಕಡ್ಡಾಯವಾಗಿ ಕೆಲಸ ನಿರ್ಬಂಧಿಸುವ ಕಾಯ್ದೆಯಲ್ಲಿ 25 ದಿನಕ್ಕಾದರೂ ಕೆಲಸ ನೀಡಲು ಸಾಧ್ಯವಿಲ್ಲ. ಅದರೊಳಗೆ 60:40 ಅನುದಾನ ಹಂಚಿಕೆಯಿಂದಾಗಿ ಕಾರ್ಮಿಕರ ವೇತನಕ್ಕೆ ಬರೆ ಹಾಕಲಾಗುತ್ತಿದೆ ಎಂದರು.
ಮೊದಲಿನ ಕಾಯ್ದೆಯ ಪ್ರಕಾರ ಹಸಿಬರ, ಒಣಬರ ಬಂದಲ್ಲಿ ಇನ್ನೂ 50 ದಿನಗಳ ಕಾಲ ಕೂಲಿ ಕೊಡಲೇಬೇಕಾದ ಕಂಡೀಶನ್ ಇತ್ತು. ಆದರೆ ಈ ಕಾಯ್ದೆಯಿಂದಾಗಿ ಸಕಾಲಕ್ಕೆ ಕೆಲಸ ಸಿಗುವ ಸಾಧ್ಯತೆ ಇಲ್ಲ. ಪಂಚಾಯತ್ ನಿರ್ಣಯಿಸುವ ಕೆಲಸಗಳನ್ನು ಇದೀಗ ಕೇಂದ್ರ ಸರಕಾರ ನಿಗದಿಪಡಿಸುತ್ತಿದೆ. ಇದು ಅಧಿಕಾರ ವಿಕೇಂದ್ರೀಕರಣದಲ್ಲಿ ಬಿಜೆಪಿ ಸರಕಾರ ಅಟ್ಟಹಾಸ ಮಾಡುತ್ತಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸುಧಾಮ ಧನ್ನಿ, ಬೀಮಶೆಟ್ಟಿ ಯಂಪಳ್ಳಿ, ಪ್ರಭು ಪ್ಯಾರಾಬಡ್ಡಿ, ಶಿವಲಿಂಗಪ್ಪ ಕುಸನೂರ, ಸಿದ್ಧಾರ್ಥ್ ಚಿಂಚೋಳಿ, ಕಾಶಿನಾಥ ಬಂಡಿ, ಮಲ್ಲಪ್ಪ ಬೀರಪ್ಪ, ಪದ್ಮಿನಿ ಕಿರಣಗಿ, ಪಾಂಡುರಂಗ ಮಾವಿನಕರ, ಮೇಘರಾಜ ಕಟಾರೆ, ಮಲ್ಲಮ್ಮ, ಜಗದೇವಿ ಚಂದನಕೆರಾ, ಮಲ್ಲಮ್ಮ ಪಡದಲ್ಲಿ, ಭಾರತಿ, ಸುವರ್ಣ ಚಿಂಚೋಳಿ ಸೇರಿದಂತೆ ಹಲವರು ಇದ್ದರು.







